ನಾಲ್ಕೂರು ಸದಾನಂದ ಪೂಜಾರಿ ವ್ಯವಸ್ಥಿತ ಕೊಲೆ : ವೇಣೂರು ಪೊಲೀಸರಿಗೆ ಮೃತನ ಪತ್ನಿ ದೂರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ನಾಲ್ಕೂರು ಗ್ರಾಮದಲ್ಲಿ ಮೇ 25ರಂದು ನಡೆದಿರುವ  ಸದಾನಂದ ಪೂಜಾರಿ ಎಂಬವರ  ಸಾವು  ವ್ಯವಸ್ಥಿತ ಕೊಲೆಯಾಗಿದ್ದು ಪ್ರಕರಣವನ್ನು  ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ  ಒತ್ತಾಯಿಸಿ  ಮೃತರ ಪತ್ನಿ ನಳಿನಾಕ್ಷಿ ಎಂಬವರು  ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

ತಾಲೂಕು ನಾಲ್ಕೂರು ಗ್ರಾಮದ ಕೆಂರ್ಪುಂಜ ಬಳ್ಳಿದಡ್ಡ ಮನೆಯ ಸಿದ್ದು ಪೂಜಾರಿ ಅವರ ಪುತ್ರ ಸದಾನಂದ ಪೂಜಾರಿ(33)ಯವರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಮೇ 25ರಂದು ಅಳದಂಗಡಿ ಸಮೀಪದ ಬಾವಲಿಗುಂಡಿ ಕಿಂಡಿಅಣೆಕಟ್ಟಿನ ಸೇತುವೆ ಅಡಿಯಲ್ಲಿ ಪತ್ತೆಯಾಗಿತ್ತು.

ಸೇತುವೆಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆಂದು ಸದಾನಂದ ಪೂಜಾರಿಯವರ ಸಹೋದರ ಸಂತೋಷ್ ವೇಣೂರು ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರೂ ಸ್ಥಳೀಯವಾಗಿ ನಾಗರಿಕರಿಂದ ಸಂಶಯ ವ್ಯಕ್ತವಾಗಿತ್ತು. ಆದರೆ ಯಾವುದೇ ದೂರು ನೀಡಿರಲಿಲ್ಲ.

ಮೇ 23ರ ರಾತ್ರಿಯಿಂದ ನಾಪತ್ತೆಯಾಗಿದ್ದ ಸದಾನಂದ ಪೂಜಾರಿ ಎರಡು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದರು. ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಶವ ಸಂಸ್ಕಾರ ಮುಗಿಸಲಾಗಿತ್ತು. ಆದರೆ ಇದೀಗ ಅವರ ಸಾವಿನ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿ ಮೃತರ ಪತ್ನಿ ನಳಿನಾಕ್ಷಿ ವೇಣೂರು ಪೊಲೀಸ್‍ಠಾಣೆಗೆದೂರು ನೀಡಿದ್ದಾರೆ.

`ಕಾಪಿನಡ್ಕ ಸ್ನೇಹಿತನ ಜೊತೆ ಜಗಳವಾಗಿತ್ತು’

“ನನ್ನ ಪತಿ ಸದಾನಂದ ಪೂಜಾರಿ ಅವರ ನೈಜ ಸಾವಲ್ಲ, ಮೇ 23ರಂದು ಅವರ ಗೆಳೆಯರೊಂದಿಗೆ ಮನೆಯಿಂದ ಹೊರಟವರು ಮತ್ತೆ ಸಂಪರ್ಕಕ್ಕೆ ಸಿಗಲೇ ಇಲ್ಲ. ಅಲ್ಲದೆ ಕಾಪಿನಡ್ಕದ ಗೆಳೆಯನೊಬ್ಬನೊಂದಿಗೆ ಇವರಿಗೆ ಗಲಾಟೆ ನಡೆದಿರುವುದಾಗಿ ಗೊತ್ತಾಗಿದೆ” ಎಂದು ಪೊಲೀಸರಿಗೆ ನೀಡಿದ ಮನವಿಯಲ್ಲಿ ನಳಿನಾಕ್ಷಿ ವಿನಂತಿಸಿದ್ದಾರೆ.