ಸಿಗಡಿ ಕೆರೆ ಸ್ವಚ್ಛತಾ ಸಮಾರೋಪ ಸಮಾರಂಭಕ್ಕೆ ಸಾಲುಮರದ ತಿಮ್ಮಕ್ಕ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ವಿವಿಧ ಸಂಘ-ಸಂಸ್ಥೆಗಳ ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ನಗರದ ಹೃದಯ ಭಾಗದಲ್ಲಿರುವ ಸಿಗಡಿ ಕೆರೆ ಸ್ವಚ್ಛತಾ ಕಾರ್ಯ ಏಪ್ರಿಲ್ 28ರಂದು ಆರಂಭಗೊಂಡಿದ್ದು, ಮೇ 21ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಸಿಗಡಿಕೆರೆಯಲ್ಲಿ ನಡೆಯಲಿದೆ. ಸಮಾರಂಭದಲ್ಲಿ ವಿಶ್ವದ ಪ್ರಭಾವಿ ಮಹಿಳೆ ಸಾಲುಮರದ ತಿಮ್ಮಕ್ಕ ಭಾಗವಹಿಸಲಿದ್ದು ಸಾರ್ವಜನಿಕರನ್ನು ಉದ್ದೇಶಿಸಿ ಆಶಯ ಭಾಷಣ ಮಾಡಲಿದ್ದಾರೆ.

ಸಾಲುಮರದ ತಿಮ್ಮಕ್ಕ ಮೂಲತಃ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾಗಿದ್ದು ಇವರು ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಸುಮಾರು 6,000 ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಭಾವಿಸಿ ಬೆಳೆಸಿದವರು. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯವನ್ನು ಮಾಡಿರುವ ಇವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಆದುದರಿಂದ ಪರಿಸರ ಸಂರಕ್ಷಣೆಗೆ ಪ್ರೇರಣೆಯಾಗಿರುವ 106 ವರ್ಷ ಪ್ರಾಯದ ಸಾಲುಮರದ ತಿಮ್ಮಕ್ಕ ಇಂದಿನ ಯುವಜನತೆಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಮೇ 21 ರಂದು ನಡೆಯುವ ಸಿಗಡಿ ಕೆರೆ ಸ್ವಚ್ಛತಾ ಕಾರ್ಯದ ಸಮಾರೋಪ ಸಮಾರಂಭಕ್ಕೆ ಸಾಲುಮರದ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.