ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ರಶ್

ಖಾಸಗಿ ವೈದ್ಯರ ಪ್ರತಿಭಟನೆ ಎಫೆಕ್ಟ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ನಾಟಕ ಖಾಸಗಿ ವೈದ್ಯಕೀಯ ಕಾಯಿದೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದರ ವಿರುದ್ದ ಸಿಡಿದೆದ್ದಿರುವ ಖಾಸಗಿ ವೈದ್ಯಕೀಯ ಸಂಘವು ಸೋಮವಾರ ಪ್ರತಿಭಟನೆ ನಡೆಸಿತು. ಖಾಸಗಿ ವೈದ್ಯರು ಹೊರರೋಗಿಗಳ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದರು. ಇದರಿಂದ ದೂರದೂರಿನಿಂದ ಖಾಸಗಿ ಆಸ್ಪತ್ರೆಗೆ ಬಂದ ರೋಗಿಗಳು, ಅವರ ಪೋಷಕರು ಸೋಮವಾರ ವೈದ್ಯರು ಸಿಗದೇ ಕಂಗಾಲಾದರು. ಖಾಸಗಿ ವೈದ್ಯರನ್ನು ಪರಿಪರಿಯಾಗಿ ಬೇಡಿದರೂ ಯಾರೂ ಕೂಡಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿತ್ತು. ಹೊರ ಜಿಲ್ಲೆಗಳಿಂದ ಆಗಮಿಸಿದ ವೃದ್ಧರು, ಅಶಕ್ತರು ತುರ್ತು ಸೇವೆ ಸಿಗದೇ ಕಂಗೆಟ್ಟರು. ಖಾಸಗಿ ಆಸ್ಪತ್ರೆಗೆ ಬಂದವರು ಅಲ್ಲಿ ಸೇವೆ ಲಭ್ಯ ಇಲ್ಲದ ಕಾರಣ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದರು. ಈ ವೇಳೆ ಅಲ್ಲಿ ಸೂಕ್ತ ಸೌಲಭ್ಯಗಳು ಇಲ್ಲದ ಕಾರಣ ರೋಗಿಗಳು ಕಂಗೆಟ್ಟರು.