ನೋಟು ನೀಷೇಧದಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕಳಕೊಳ್ಳುತ್ತಿರುವ ಬೀಡಿ ಕಾರ್ಮಿಕರು

ವಿಶೇಷ ವರದಿ

ಮಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ ತಿಂಗಳು ಕೈಗೊಂಡಿರುವ ಹಳೇ ನೋಟುಗಳ ನಿಷೇಧ ಕ್ರಮದಿಂದ ಗ್ರಾಮೀಣ ಪ್ರದೇಶದ ಬಡವರ ಮೇಲೆ ಗದಾ ಪ್ರಹಾರ ಮಾಡಿದಂತಾಗಿದ್ದು, ಬೀಡಿ ಕಾರ್ಮಿಕರು ನಿಧಾನವಾಗಿ ಉದ್ಯೋಗ ಕಳಕೊಳ್ಳತೊಡಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ಬೀಡಿ ಸುತ್ತುವ ಕಾಯಕ ಮಾಡುವ ಮಹಿಳಾ ಕಾರ್ಮಿಕರಿದ್ದು, ಬಹುತೇಕ ಮಂದಿ ಬ್ಯಾಂಕ್ ಖಾತೆ ಹೊಂದಿಲ್ಲ. ಸುಮಾರು ಎರಡು ಲಕ್ಷ ಮಂದಿ ಪಿಂಚಣಿ ಮತ್ತು ಭವಿಷ್ಯನಿಧಿ ಯೋಜನೆಗಳಿಗೆ ನೋಂದಾವಣೆ ಆಗಿದ್ದರೂ ಇವರೆಲ್ಲರೂ ಬ್ಯಾಂಕ್ ಖಾತೆ ಹೊಂದಿಲ್ಲ.

ಬಿಡುವಿನ ಸಮಯದಲ್ಲಿ ಬೀಡಿ ಸುತ್ತುವ ಕಾಯಕ ಮಾಡುವ ಬೀಡಿ ಕಾರ್ಮಿಕರು ಇದೀಗ ತಮ್ಮ ವಾರದ ಸಣ್ಣ ಮೊತ್ತದ ವೇತನಕ್ಕಾಗಿ ದೂರದಲ್ಲಿರುವ ಬ್ಯಾಂಕು ಬ್ರಾಂಚುಗಳಲ್ಲಿ ಸಮಯ ಕಳೆಯಲು ಸಿದ್ಧರಾಗಿಲ್ಲ. ಅರ್ಧ ಪ್ರಮಾಣದ ಬೀಡಿ ಕಾರ್ಮಿಕರು ವಾರದಲ್ಲಿ ಐನೂರು ರೂಪಾಯಿಗಿಂತ ಕಡಿಮೆ ವೇತನ ಪಡೆಯುತ್ತಿದ್ದು, ಅದನ್ನು ಪಡೆಯಲು ಬ್ಯಾಂಕುಗಳಲ್ಲಿ ಕ್ಯೂ ನಿಲ್ಲುವುದರಲ್ಲಿ ಅರ್ಥ ಇಲ್ಲ ಎನ್ನುತ್ತಾರೆ ಬೀಡಿ ಕಾರ್ಮಿಕ ಮಹಿಳೆಯರು.

ಕೆಲವೊಂದು ವಾರದಲ್ಲಿ ನೂರು, ನೂರೈವತ್ತು ರೂ ಮಜೂರಿ ಬಂದರೆ ಹೆಚ್ಚು. ಸ್ವಸಹಾಯ ಸಂಘದಿಂದ ಪಡೆದ ಸಾಲ ಮತ್ತು ಇತರ ಸಣ್ಣ ಪುಟ್ಟ ಖರ್ಚುಗಳಿಗೆ ಇದು ಸಾಕಾಗುತ್ತದೆ. ಈ ಚಿಕ್ಕ ಮೊತ್ತವನ್ನು ಪಡೆಯಲು ಬ್ಯಾಂಕಿಗೆ ಹೋಗಬೇಕೆ ಎಂದವರು ಪ್ರಶ್ನಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಎಟಿಎಂ ಸೌಲಭ್ಯ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಇದುವರೆಗೆ ಬೀಡಿ ಸಂಗ್ರಹ ಮಾಡುವವರೇ ಮಹಿಳೆಯರಿಗೆ ನಗದು ರೂಪದಲ್ಲಿ ವಾರಕ್ಕೊಮ್ಮೆ ವೇತನ ಬಟವಾಡೆ ಮಾಡುತ್ತಿದ್ದರು. ಈಗ ಬ್ಯಾಂಕಿನಿಂದ ಹಣ ಪಡೆಯುವ ಮಿತಿ ಇರುವುದರಿಂದ ಬಹುತೇಕ ಮಂದಿ ಕಾರ್ಮಿಕರಿಗೆ ವೇತನ ದೊರೆಯದೆ ವಾರಗಳೇ ಕಳೆದಿವೆ.

ಇದರಿಂದ ಸ್ವಸಹಾಯ ಸಂಘದಿಂದ ಪಡೆದ ಸಾಲದ ಕಂತು ಪಾವತಿಸಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರು ದುಬಾರಿ ಬಡ್ಡಿ ತೆರಬೇಕಾದ ಪ್ರಮೇಯ ಬರಬಹುದು.

ಬಹಳಷ್ಟು ಮಂದಿ ಬೀಡಿ ಕಾರ್ಮಿಕರು ಈ ಕೆಲಸವನ್ನು ಕೈಬಿಡುವ ಯೋಚನೆ ಮಾಡುತ್ತಿದ್ದರೆ, ಅತ್ತ ಬೀಡಿ ಸಂಗ್ರಹ ಮಾಡುವ ಮಂದಿ ಹಾಗೂ ಸಣ್ಣ ಪ್ರಮಾಣದ ಬೀಡಿ ಗುತ್ತಿಗೆದಾರರು ಉದ್ಯೋಗ ನಿಲ್ಲಿಸಲು ಮುಂದಾಗಿದ್ದಾರೆ. ಸಾಮಾನ್ಯವಾಗಿ ಬೀಡಿ ಸಂಗ್ರಾಹಕರಿಗೆ ನೋಂದಾವಣೆ ಆದ ಕಾರ್ಮಿಕರ ಬೀಡಿ ಉತ್ಪಾದನೆ ಆಧಾರದಲ್ಲಿ ಸಣ್ಣ ಪ್ರಮಾಣದ ಆದಾಯ ಬರುತಿತ್ತು. ಇದೀಗ ಎಲ್ಲವೂ ಬ್ಯಾಂಕ್ ಮೂಲಕ ವೇತನ ಮತ್ತು ಬೋನಸ್ ವಿತರಣೆಯಾದಾಗ ಗುತ್ತಿಗೆದಾರನ ಆದಾಯಕ್ಕೆ ಪೆಟ್ಟು ಬೀಳಲಿದೆ. ಅದಕ್ಕೂ ಮುನ್ನವೇ ವ್ಯಾಪಾರ ನಿಲ್ಲಿಸಲು ಯೋಚನೆ ಮಾಡುತ್ತಿದ್ದು, ಆಗ ಕಾರ್ಮಿಕರು ಕೂಡ ಉದ್ಯೋಗ ಕಳಕೊಳ್ಳಲಿದ್ದಾರೆ.

ಕರಾವಳಿಯ ಬೀಡಿ ಉದ್ಯಮದಲ್ಲಿ ಏಳು ದೊಡ್ಡ ಮತ್ತು ಮುನ್ನೂರು ಸಣ್ಣ ಬೀಡಿ ಕಂಪೆನಿಗಳಿದ್ದು, ಅವುಗಳಿಗೆ ಬೀಡಿ ಪೂರೈಸುವ ಕೆಲಸವನ್ನು ಎರಡು ಸಾವಿರಕ್ಕೂ ಹೆಚ್ಚಿರುವ ಗುತ್ತಿಗೆದಾರರು, ಬೀಡಿ ಸಂಗ್ರಾಹಕರು ಮಾಡುತ್ತಿದ್ದಾರೆ. ಒಂದು ದಿನ ಕಷ್ಟಪಟ್ಟು ಬೀಡಿ ಮಾತ್ರವೇ ಸುತ್ತಿದರೆ ದೊರೆಯುವ ವೇತನ ಸರಾಸರಿ 150 ರಿಂದ 180 ರೂಪಾಯಿ ಮಾತ್ರ. ಒಂದು ಸಾವಿರ ಬೀಡಿ ಕಟ್ಟಿದರೆ ಗುತ್ತಿಗೆದಾರ ನೀಡುವುದು 170 ರೂಪಾಯಿ. ಇಂದಿನ ಕಾಲದಲ್ಲಿ ಇದು ತೀರ ಕಡಿಮೆ ಆದ ಕಾರಣ ಪೂರ್ಣಾವಧಿ ಬೀಡಿ ಸುತ್ತುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವಿಟ್ಲ, ಮಂಗಳೂರು ಮುಂತಾದ ಪ್ರದೇಶಗಳಲ್ಲಿ ಬೀಡಿ ಕಟ್ಟುವ ಕಾಯಕ ಮಾತ್ರ ಮಾಡುವವರ ಸಂಖ್ಯೆ ಶೇಕಡ 20ಕ್ಕೆ ಇಳಿಕೆಯಾಗಿದೆ. ಸದ್ಯ ಕೇಂದ್ರ ಸರಕಾರದ ಹಣಕಾಸು ನೀತಿಯಂದಾಗಿ ಅರೆಕಾಲಿಕ ಬೀಡಿ ಕಟ್ಟುವವರು ಕೂಡ ಉದ್ಯೋಗ ಕಳಕೊಳ್ಳಲಿದ್ದಾರೆ.