ಮೂಡುಬಿದಿರೆಯಲ್ಲಿ ಮಕ್ಕಳ ಅಪಹರಣ ವದಂತಿ

ಸಾಂದರ್ಭಿಕ ಚಿತ್ರ

ನಾಗರಿಕರಲ್ಲಿ ಆತಂಕ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಇಲ್ಲಿನ ಪೇಟೆಯಲ್ಲಿ ಬುಧವಾರ ಬೆಳಿಗ್ಗೆ ಶಾಲಾ ಬಾಲಕಿಯೊಬ್ಬಳ ಅಪಹರಣಕ್ಕೆ ಯತ್ನ ನಡೆದಿರುವ ಸುದ್ದಿ ಹಬ್ಬಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಬುಧವಾರ ಬೆಳಿಗ್ಗೆ ಸುಮಾರು 8-45ಕ್ಕೆ ಹನುಮಂತ ದೇವಸ್ಥಾನ ಬಳಿ ಓಮ್ನಿಯಲ್ಲಿ ಬಂದ ನಾಲ್ವರ ತಂಡವೊಂದು 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಅಪಹರಣಕ್ಕೆ ಯತ್ನ ನಡೆಸಿದೆ ಎನ್ನಲಾಗಿದೆ. ಪೊಲೀಸ್ ಡ್ರೆಸ್ಸಿನಲ್ಲಿದ್ದ ವ್ಯಕ್ತಿಯೊಬ್ಬ ವಾಹನದಿಂದ ಹೊರಬಂದು ಬಾಲಕಿಯ ಕೈಹಿಡಿದು ಎಳೆದಾಗ ಆಕೆ ತಪ್ಪಿಸಿಕೊಂಡು ಭಯದಲ್ಲಿ ಓಡಿಹೋದಳೆನ್ನಲಾಗಿದೆ. ವಾಹನದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಪೊಲೀಸ್ ಡ್ರೆಸ್ಸಿನಲ್ಲಿದ್ದರೆ ಮತ್ತಿಬ್ಬರು ಮಾಮೂಲಿ ಡ್ರೆಸ್ಸಿನಲ್ಲಿದ್ದು ಎಲ್ಲರು ಮಧ್ಯ ವಯಸ್ಸಿನವರೆನ್ನಲಾಗಿದೆ.

ಕೆಲ ದಿನಗಳ ಹಿಂದೆ ಕೊಡಂಗಲ್ಲು ಬಳಿ ಮದರಸ ವಿದ್ಯಾರ್ಥಿನಿಯನ್ನು ಕೂಡ ಅಪಹರಣಕ್ಕೆ ಯತ್ನಿಸಿದ್ದು ಅಪಹರಣಕಾರರಿಂದ ಬಾಲಕಿ ತಪ್ಪಿಸಿಕೊಂಡು ಮನೆ ಸೇರಿದ್ದಳೆನ್ನಲಾಗಿದೆ.

ಶನಿವಾರ ಮಧ್ಯಾಹ್ನ ಹೊಸಬೆಟ್ಟು ಪಂಚಾಯತಿ ಬಳಿಯ ತೋಡಾರು ಒಳರಸ್ತೆಯಲ್ಲಿ ಮಧ್ಯಾಹ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ 6ನೇ ತರಗತಿ ವಿದ್ಯಾರ್ಥಿಗೆ ಬಿಳಿ ಮಾರುತಿ ಕಾರಿನಲ್ಲಿ ಬಂದ ತಂಡದ ಪೈಕಿ ವ್ಯಕ್ತಿಯೊಬ್ಬ ಚಾಕಲೇಟು ನೀಡಲೆತ್ನಿಸಿದ್ದು, ಹೆದರಿ ವಿದ್ಯಾರ್ಥಿ ಅಲ್ಲಿಂದ ಪರಾರಿಯಾಗಿ ಮೋರಿ ಬಳಿ ಅಡಗಿ ಕುಳಿತು ಬಚಾವಾದನೆನ್ನಲಾಗಿದೆ. ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಗಂಡಸರು ಮತ್ತು ಒಬ್ಬಳು ಮಹಿಳೆ ಇದ್ದಳು.

ಮಕ್ಕಳ ಅಪಹರಣದ ಬಗ್ಗೆ ಕಳೆದ ಕೆಲ ದಿನಗಳಿಂದ ಮೂಡುಬಿದಿರೆಯಲ್ಲಿ ಸಾರ್ವಜನಿಕರು ಮಾತನಾಡುತ್ತಿದ್ದರೂ ಪೊಲೀಸ್ ಠಾಣೆಯಲ್ಲಿ ಇದುವರೆಗೆ ದೂರು ದಾಖಲಾಗಿರಲಿಲ್ಲ.

ನಾಕಾಬಂದಿ

ಮಕ್ಕಳ ಅಪಹರಣದ ಬಗ್ಗೆ ಮೌಖಿಕ ದೂರು ಬಂದಿದೆ. ಆದರೆ ಯಾರು ಅಧಿಕೃತ ದೂರು ನೀಡಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ವಿದ್ಯಾರ್ಥಿನಿ ಹಾಗೂ ಶಿಕ್ಷಕಿಯನ್ನು ಕರೆಸಿ ಮಾಹಿತಿ ಸಂಗ್ರಹಿಸಿದ್ದು, ಘಟನೆಯಲ್ಲಿ ಸತ್ಯಾಂಶ ಕಂಡುಬಂದಿಲ್ಲ. ಆದರೂ ನಾಕಾಬಂದಿ ವಾಹನಗಳ ತಪಾಸಣೆ ನಡೆಸಿದ್ದೇವೆ. ತನಿಖೆ ನಡೆಸುತ್ತಿದ್ದೇವೆ. ಮಕ್ಕಳ ಅಪಹರಣ ಸುಲಭವಲ್ಲ. ಸಾರ್ವಜನಿಕರು ಭಯಪಡಬೇಕಾಗಿಲ್ಲ ಎಂದು ಇನಸ್ಪೆಕ್ಟರ್ ರಾಮಚಂದ್ರ ನಾಯಕ್ ಮಾಧ್ಯಮಕ್ಕೆ ತಿಳಿಸಿದ್ದಾರೆ.