ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ `ಮೂರ್ಖತನ’ ಎಂದ ಇತಿಹಾಸ ತಜ್ಞ

“ಭಾರತ ಹಲವು ರಾಷ್ಟ್ರೀಯತೆಗಳ ಸಂಗಮ’

ನವದೆಹಲಿ : ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭಗೊಳ್ಳುವ ಮುನ್ನ ರಾಷ್ಟ್ರಗೀತೆ ನುಡಿಸುವುದು ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಆದೇಶವನ್ನು ಖ್ಯಾತ ಇತಿಹಾಸ ತಜ್ಞ ಎಂ ಜಿ ಎಸ್ ನಾರಾಯಣï ಬಲವಾಗಿ ಟೀಕಿಸಿ  ಅದನ್ನು “ಮೂರ್ಖತನ” ಎಂದು ಬಣ್ಣಿಸಿದ್ದಾರೆ.

ನ್ಯಾಯಾಂಗವು ತನ್ನ ಪರಿಧಿಯಾಚೆಗೆ ಹೋಗಿರುವ ಉದಾಹರಣೆ ಇದಾಗಿದೆ ಎಂದು ಹೇಳಿರುವ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಇದರ ಮಾಜಿ ಅಧ್ಯಕ್ಷರೂ ಆಗಿರುವ ನಾರಾಯಣನ್, “ಈ ಆದೇಶವನ್ನು ಸಮರ್ಥಿಸುವ ಅಥವಾ ಟೀಕಿಸುವ ಅಗತ್ಯವೇ ಇಲ್ಲ. ಜನರು ಅದನ್ನು ವಿಫಲಗೊಳಿಸದೇ ಇದ್ದರೂ ಅದು ತಾನಾಗಿಯೇ ವಿಫಲವಾಗುತ್ತದೆ” ಎಂದು ಅವರು ಹೇಳಿದ್ದಾರೆ.

“ಮನರಂಜನೆಗಾಗಿ ಚಿತ್ರಮಂದಿರಗಳಿಗೆ ಬರುವ ಜನರ ಮೇಲೆ ಬಲವಂತವಾಗಿ ರಾಷ್ಟ್ರೀಯವಾದದ ಭಾವನೆಯನ್ನು ಹೇರಲು ಸಾಧ್ಯವಿಲ್ಲ. ಇದು ಯಶಸ್ವಿಯಾಗುವುದಿಲ್ಲ, ವಿಫಲವಾಗುತ್ತದೆ” ಎಂದು `ಮಾತೃಭೂಮಿ’ಯಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. “ಭಾರತವನ್ನು  ವಿವಿಧ ರಾಷ್ಟ್ರೀಯತೆಗಳ ಒಕ್ಕೂಟವೆಂದು ಹೇಳಬಹುದೇ ಹೊರತು ಅದೊಂದು ರಾಷ್ಟ್ರವೆಂದಲ್ಲ. ಅದು ಒಂದು ರಾಷ್ಟ್ರವೆಂದು ನನಗನಿಸಿಯೇ ಇಲ್ಲ” ಎಂದ ಅವರು “ರಾಷ್ಟ್ರಭಕ್ತಿಯ ಭಾವನೆ ಮೂಡಿದಾಗ ಮಾತ್ರ ರಾಷ್ಟ್ರಗೀತೆ ಪ್ರಸ್ತುತವಾಗುತ್ತದೆ. ಆದರೆ ಈ ಭಾವನೆ ಸಹಜವಾಗಿ ಬರಬೇಕು, ಅದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ” ಎಂದವರು ಹೇಳಿದ್ದಾರೆ.