ಸುಳ್ಯದ ಶಾಲೆಗೆ ಆದಾಯ ಮೂಲ ಈ ರಬ್ಬರ್ ತೋಟ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುಳ್ಯ ಬಾಳಿಲದ ವಿದ್ಯಾಬೊಧಿಸಿ ಎಜ್ಯುಕೇಶನ್ ಸಂಸ್ಥೆಯ 10 ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 900 ರಬ್ಬರ್ ಗಿಡಗಳು ಈಗ ಬೆಳೆದು ನಿಂತು ಇಳುವರಿ ಕೊಡುತ್ತಿದ್ದು, ಇದು ಸಂಸ್ಥೆಯ ಖರ್ಚುವೆಚ್ಚಕ್ಕೆ ಆಶಾದಾಯಕವಾಗಿದೆ. ಸಂಸ್ಥೆಯ ಗೌರವಾಧ್ಯಕ್ಷ ನೆತ್ತರ್ ವೆಂಕಟರಮಣ ಭಟ್ ಶಿಕ್ಷಣ-ರಬ್ಬರ್ ತೋಟದ ನಿರ್ಮಾತೃರಾಗಿದ್ದಾರೆ.

ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷ 600 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾರೆ. ಸರ್ಕಾರಿ ಅನುದಾನಿತ ಈ ಶಾಲೆ ವಾರ್ಷಿಕ ಅನುದಾನ ಕೊರತೆ ಎದುರಿಸುತ್ತಿತ್ತು. ಆದರೆ ರಬ್ಬರ್ ತೋಟದ ಆದಾಯ, ಶಾಲೆಯ ಖರ್ಚುವೆಚ್ಚ ಸರಿದೂಗಿಸುತ್ತಿದೆ ಎಂದು ಸಂಸ್ಥೆಯ ವಕ್ತಾರರೊಬ್ಬರು ಹೇಳುತ್ತಾರೆ.

ಶಾಲೆಯ ವೆಚ್ಚ ನಿರ್ವಹಿಸಲು ಆಡಳಿತವು 2007ರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನೆರವಿಂದ ಸುತ್ತಲ ಬಂಜರು ಪ್ರದೇಶದಲ್ಲಿ 900 ರಬ್ಬರ್ ಸಸಿ ನೆಟ್ಟಿದ್ದು, ಈಗ ಆದಾಯ ಮೂಲವಾಗಿದೆ. ಕಡಿಮೆಯೆಂದರೆ ಇದರಿಂದ ಶಾಲೆಗೆ ವಾರ್ಷಿಕ ಒಂದು ಲಕ್ಷ ರೂ ಆದಾಯ ಬರುತ್ತಿದೆ.

“ಈ ತೋಟವನ್ನು ಹೆಚ್ಚು ಆಸಕ್ತಿಯಿಂದ ನೋಡಿಕೊಂಡರೆ ಇನ್ನೂ ಹೆಚ್ಚು ಆದಾಯ ಪಡೆಯಲು ಸಾಧ್ಯವಿದೆ. ಆದರೆ ನಮ್ಮದು ಶಿಕ್ಷಣ ಸಂಸ್ಥೆಯಾಗಿರುವುದರಿಂದ ತೋಟಕ್ಕಿಂತ ಹೆಚ್ಚು ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ” ಎಂದವರು ಹೇಳಿದ್ದಾರೆ.

ಸದ್ಯ ತೋಟವನ್ನು ನೋಡಿಕೊಳ್ಳಲು ಇಬ್ಬರಿದ್ದಾರೆ. ಅವರೇ ದಿನಗೂಲಿಯಂತೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾರೆ. ದಿನಕ್ಕೆ 40 ಲೀಟರ್ ರಬ್ಬರ್ ಹಾಲು ದೊರೆಯುತ್ತಿದೆ. ಇದನ್ನು ಬೆಳ್ಳಾರೆಯ ರಬ್ಬರ್ ಸೊಸೈಟಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಖಜಾಂಚಿ ಕಿರಣ್ ನೆತ್ತರ್ ತಿಳಿಸಿದ್ದಾರೆ.

ಈ ಶಾಲೆಯಲ್ಲಿ ಎರಡು ದಶಕಗಳ ಹಿಂದೆಯೇ ಮಳೆ ನೀರು ಕೊಯ್ಲು ಆರಂಭಿಸಲಾಗಿದೆ. ಇದರಿಂದ ಐದು ಎಕ್ರೆ ಜಾಗದಲ್ಲಿರುವ ರಬ್ಬರ್ ತೋಟಕ್ಕೂ ಪರಿಸರಕ್ಕೂ ಉಪಯೋಗವಾಗುತ್ತಿದೆ.