7 ತಿಂಗಳಿಂದ ವೇತನವಿಲ್ಲ : ಕೆಲಸ ನಿಲ್ಲಿಸಿ ಆರ್ ಟಿ ಒ ಕಚೇರಿ ಸಿಬ್ಬಂದಿ ಪ್ರತಿಭಟನೆ

ಉಡುಪಿ : ಮಣಿಪಾಲದ ಆರ್ ಟಿ ಓ ಕಚೇರಿಯಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡಿದ್ದ ಖಾಸಗಿ ಸಂಸ್ಥೆ ಸಿಬ್ಬಂದಿಗಳಿಗೆ ಕಳೆದ 7 ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ಮೂವರು ಮಹಿಳಾ ಸಿಬ್ಬಂದಿಗಳಾದ ಚಿತ್ರ, ನಂದಿತಾ ಮತ್ತು ಜಯಲಕ್ಷ್ಮೀ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಇದರಿಂದಾಗಿ ಡಾಟಾ ಎಂಟ್ರಿ ಕಚೇರಿಗೆ ಬಂದ ಸುಮಾರು 200ಕ್ಕೂ ಅಧಿಕ ಸಾರ್ವಜನಿಕರು ಮಾತ್ರ ಕಂಗೆಟ್ಟರು.

ಬೆಂಗಳೂರಿನಲ್ಲಿರುವ ಆರ್ ಟಿ ಒ ಪ್ರಧಾನ ಕಚೇರಿ ಇಲ್ಲಿನ ಆರ್ ಟಿ ಒ ಕಚೇರಿಗೆ ಸಿಬ್ಬಂದಿಗಳನ್ನು ನೇಮಿಸಿ ಮೈಂಡ್ ಸೊಲ್ಯೂಷನ್ ಎನ್ನುವ ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿದೆ. ಈ ಸಂಸ್ಥೆ ಕಳೆದ 7 ತಿಂಗಳಿನಿಂದ ಸಂಬಳ ನೀಡಿಲ್ಲ. ಕನಿಷ್ಠ ಸರಿಯಾದ ವ್ಯವಸ್ಥೆಯನ್ನೂ ಕಲ್ಪಿಸದೇ  ಸತಾಯಿಸುತ್ತಿದೆ. ಎಂ ಡಿ ಚಂದ್ರಕಾಂತ್ ಕನಿಷ್ಟ ವೇತನವನ್ನೂ ನೀಡುತ್ತಿಲ್ಲ. ಕೇವಲ ನಾಲ್ಕೂವರೆ ಸಾವಿರ ರೂ ನಿಗದಿ ಮಾಡಿದೆ. ಆದರೆ ನಿಗದಿ ಮಾಡಿದ ಸಂಬಳವನ್ನೂ ಕಳೆದ ಏಳು ತಿಂಗಳಿನಿಂದ ಕೊಟ್ಟಿಲ್ಲ ಎಂದು ಮೂವರು ಮಹಿಳಾ ಸಿಬ್ಬಂದಿಗಳು ದೂರಿದ್ದಾರೆ.

ಆರ್‍ಟಿಓರಲ್ಲಿ ವೇತನ ಕೇಳಿದರೆ ನಿಮ್ಮನ್ನು ನೇಮಿಸಿದ ಖಾಸಗಿ ಸಂಸ್ಥೆಯನ್ನು ಕೇಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಸಿಬ್ಬಂದಿಗಳು ದೂರಿದ್ದಾರೆ.