ಆರ್ ಟಿ ಐ ಕಾರ್ಯಕರ್ತ ವಿನಾಯಕ ತಾಯಿ ಜಯಂತಿ ಬಾಳಿಗಾ ಕಣ್ಣುದಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾರ ತಾಯಿ ಜಯಂತಿ ಬಾಳಿಗಾ ವಿಧಿವಶರಾಗಿದ್ದು, ಇದೀಗ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಈ ಮೂಲಕ ತನ್ನ ಇಳಿವಯಸ್ಸಿನಲ್ಲಿ ತನ್ನ ಮಗನ ಸಾವಿಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ಕಣ್ಣಾರೆ ಕಾಣುವ ಇನ್ನೊಬ್ಬರ ಬಾಳಿಗೆ ಜಯಂತಿ ಮಹಾನ್ ಆಗಿದ್ದಾರೆ.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಂತಿ ಬಾಳಿಗಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು ಜ್ವರಕ್ಕೆ ಈಡಾಗಿದ್ದ ಅವರು ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರ ಕಣ್ಣುಗಳನ್ನು ದಾನ ಮಾಡಬೇಕೆಂದು ಮೊದಲೇ ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಕಣ್ಣುಗಳನ್ನು ದಾನ ಮಾಡಲಾಯಿತು.

ಜಯಂತಿ ಬಾಳಿಗಾರ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಶವಸಂಸ್ಕಾರದ ಮುನ್ನ ಸಾವಿಗೀಡಾದ ವಿನಾಯಕ ಬಾಳಿಗಾರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಾವು ಹೋರಾಟ ಮಾಡುವೆವು ಎನ್ನುವ ಪ್ರತಿಜ್ಞೆಯನ್ನು ಹೋರಾಟಗಾರ ನರೇಂದ್ರ ನಾಯಕ್, ಡಿ ವೈ ಎಫ್ ಐ ಮುಖಂಡರಾದ ದಯಾನಂದ ಶೆಟ್ಟಿ, ಸಂತೋಷ್ ಬಜಾಲ್ ಮೊದಲಾದವರು ಮಾಡಿದರು.

ಬಾಳಿಗಾ ಸಾವಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಇನ್ನು ಹೋರಾಟ ತೀವ್ರಗೊಳ್ಳಲಿದೆ. “ನಿಮ್ಮ ಜೀವಿತಾವಧಿಯಲ್ಲೇ ನ್ಯಾಯಕೊಡಿಸಲು ನಾವು ಹೋರಾಟ ಮಾಡಿದೆವು. ಆದರೆ ಸಾಧ್ಯವಾಗಲಿಲ್ಲ. ನಮ್ಮನ್ನು ಕ್ಷಮಿಸಿರಿ. ಮುಂದಿನ ದಿನಗಳಲ್ಲೂ ಹೋರಾಟ ನಿಲ್ಲಿಸುವ ಪ್ರಶ್ನೆ ಇಲ್ಲ. ಹೋರಾಟ ಇನ್ನು ತೀವ್ರವಾಗಲಿದೆ. ನ್ಯಾಯ ಸಿಗುವವರೆಗೂ ಹೋರಾಟ ಇದೆ. ನೀವು ದಾನ ಮಾಡಿದ ಕಣ್ಣುಗಳಿಂದ ನಿಮ್ಮ ಮಗನಿಗೆ ನ್ಯಾಯ ಸಿಗುವುದನ್ನು ನೋಡುವ ವಿಶ್ವಾಸ ನಮಗಿದೆ ಎಂದು ಹೇಳಿಕೊಂಡೇ ನಾವು ಪಾರ್ಥಿವ ಶರೀರವನ್ನು ಬಿಟ್ಟುಕೊಟ್ಟೆವು” ಎಂದು ನರೇಂದ್ರ ನಾಯಕ್ ಪತ್ರಕರ್ತರೊಂದಿಗೆ ಗದ್ಗದಿತರಾಗಿ ನುಡಿದರು.

ತಮ್ಮ ಪುತ್ರನ ಸಾವಿಗೆ ನ್ಯಾಯ ಕೊಡಿಸಲೆಂದು ಇಳಿ ಹರೆಯದ ಜಯಂತಿ ಬಾಳಿಗಾರು ಪತಿ ರಾಮಚಂದ್ರ ಬಾಳಿಗಾರೊಂದಿಗೆ ಕಾನೂನು ಹೋರಾಟ ನಡೆಸಿದ್ದರು.