ಮನೋಜ್ ಸಿನ್ಹಾ ಸೀಎಂ ಕನಸು ಮುರಿದ ಆರೆಸ್ಸೆಸ್

ಜಾತಿ ವಿಚಾರದಲ್ಲಿ ತಟಸ್ಥವಾಗಿರುವ ನಾಯಕನನ್ನು ಆರ್ ಎಸ್ ಎಸ್ ಬಯಸಿತ್ತು. ಆದಿತ್ಯನಾಥ್ ಕೂಡ ಅವಕಾಶವನ್ನು ಕಬಳಿಸಲು ಪ್ರಯತ್ನಿಸಿದ್ದರು.

ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವ ಕನಸನ್ನು ಬಿಜೆಪಿಯ ಸೈದ್ಧಾಂತಿಕ ಗುರುವಾಗಿರುವ ಆರೆಸ್ಸೆಸ್ ಭಂಗಗೊಳಿಸಿದೆ. ಬಿಜೆಪಿಯ 312 ಶಾಸಕರು ಉತ್ತರ ಪ್ರದೇಶದಲ್ಲಿ ತಮ್ಮ ನಾಯಕರಾಗಿ ಸಂಸದ ಯೋಜಿ ಆದಿತ್ಯನಾಥರನ್ನು ಆರಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಆದರೆ ಇದಕ್ಕೆ ಮೊದಲು ಲಖನೌ ಮತ್ತು ದೆಹಲಿಯಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ದೊಡ್ಡ ಯುದ್ಧವೇ ನಡೆದಿತ್ತು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಸಿಎಂ ಆಗುವ ನಿಟ್ಟಿನಲ್ಲಿ ಮನೋಜ್ ಸಿನ್ಹಾ ಮುಂಚೂಣಿಯಲ್ಲಿದ್ದರು. ಆದರೆ ಹೋಳಿಯ ನಂತರ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ನಡುವೆ ನಡೆದ ಸಭೆಯಲ್ಲಿ ಸಿನ್ಹಾ ಹೆಸರು ಹಿಂದಕ್ಕೆ ಸರಿದಿದೆ.
ಕಾಲೇಜು ದಿನಗಳಲ್ಲಿ ಎಬಿವಿಪಿ ಕಾರ್ಯಕರ್ತನಾಗಿ ಮುಂಚೂಣಿಯಲ್ಲಿದ್ದ ಸಿನ್ಹಾ ಉತ್ತರ ಪ್ರದೇಶದಲ್ಲಿ ಆರ್ ಎಸ್ ಎಸ್ ಕಾರ್ಯಯೋಜನೆಯನ್ನು ರೂಪಿಸಲು ಸೂಕ್ತ ವ್ಯಕ್ತಿ ಎನಿಸಿಕೊಳ್ಳುವಲ್ಲಿ ವಿಫಲರಾದರು. ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವೆ ಸಂಯೋಜಕರಾಗಿರುವ ಆರ್ ಎಸ್ ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಅವರು ಸಿನ್ಹಾರನ್ನು ಸೀಎಂ ಕುರ್ಚಿಯಲ್ಲಿ ಕೂರಿಸುವುದನ್ನು ವಿರೋಧಿಸಿದ್ದರು. ಪೂರ್ವಾಂಚಲದಲ್ಲಿ ಕೃಷ್ಣ ಗೋಪಾಲ್ ಆರ್ ಎಸ್ ಎಸ್ ಪ್ರಚಾರಕರಾಗಿದ್ದಾಗ 90ರ ದಶಕದಲ್ಲಿ ಸಿನ್ಹಾ ಸಂಸದರಾಗಿ ಅವರನ್ನು ಎದಿರು ಹಾಕಿಕೊಂಡಿರುವುದೂ ಇದಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೆ ಒಂದು ಜಾತಿ ಬಗ್ಗೆ ಮೃದು ಭಾವನೆಯನ್ನು ಹೊಂದಿದ್ದಾರೆ ಎನ್ನುವ ಆರೋಪವೂ ಸಿನ್ಹಾ ಮೇಲಿದೆ.
ಜಾತಿಯ ವಿಚಾರದಲ್ಲಿ ತಟಸ್ಥವಾಗಿರುವ ನಾಯಕನನ್ನು ಆರ್ ಎಸ್ ಎಸ್ ಬಯಸಿತ್ತು. ಆದಿತ್ಯನಾಥ್ ಕೂಡ ಅವಕಾಶವನ್ನು ಕಬಳಿಸಲು ಪ್ರಯತ್ನಿಸಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಮೌರ್ಯ ಕೂಡ ಸಿನ್ಹಾಗೆ ಅವಕಾಶ ಸಿಗದಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಲಹಾಬಾದಿನ ಒಬಿಸಿ ನಾಯಕರಾಗಿರುವ ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಅವರು ಸಿನ್ಹಾ ಹೆಸರನ್ನು ಒಪ್ಪಿರಲಿಲ್ಲ.
ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಸೀಎಂ ಅಭ್ಯರ್ಥಿಯಾಗಿ ಮೌರ್ಯ ಹೆಸರು ಕೇಳಿಬರುತ್ತಿದ್ದರೂ, ಚುನಾವಣಾ ನಂತರ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಕ್ಕೆ ಅವರು ಸೂಕ್ತ ವ್ಯಕ್ತಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರಾಜನಾಥ್ ಸಿಂಗ್ ಅವರಂತಹ ಪ್ರಭಾವೀ ವ್ಯಕ್ತಿತ್ವದವರು ಸೀಎಂ ಕುರ್ಚಿಯಲ್ಲಿ ಕೂರಬೇಕು ಎನ್ನುವುದು ಆರ್ ಎಸ್ ಎಸ್ ನಾಯಕರ ಅಭಿಪ್ರಾಯವಾಗಿತ್ತು. ಆದರೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ಈ ಹೆಸರು ರುಚಿಸಲಿಲ್ಲ.
ಅವರು ಯುವ ನಾಯಕರನ್ನು ಸೀಎಂ ಆಗಿ ಬಯಸಿದ್ದರು. ಹೀಗಾಗಿ 44 ವರ್ಷದ ಆರ್ ಎಸ್ ಎಸ್ ವ್ಯಕ್ತಿ ಮತ್ತು ವಿಎಚ್‍ಪಿಯ ನಾಯಕ ಆದಿತ್ಯನಾಥರಿಗೆ ಅನಾಯಾಸವಾಗಿ ಸೀಎಂ ಪಟ್ಟ ಒಲಿದುಬಂತು.