ಆರೆಸ್ಸೆಸ್ಸಿಗ ಹತ್ಯೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಾರ್ಯಕರ್ತ ವಡೇಕುಟ್ಟಲ ಆನಂದ(23)ನನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿ ಪರಾರಿಯಾಗಿದೆ. ತ್ರಿಶೂರು ಜಿಲ್ಲೆಯ ಗುರುವಾಯೂರಿನಲ್ಲಿ ಈ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆ ಹಿಂದೆ ಸಿಪಿಐಎಂ ಪಕ್ಷದ ಕಾರ್ಯಕರ್ತರ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದೆ.

ಗುರುವಾಯನಕೆರೆ ನೆನ್ಮಿನಿ ಎಂಬಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಆನಂದನನ್ನು ಅಡ್ಡಗಟ್ಟಿದ ತಂಡ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಅವರನ್ನು  ಕೂಡಲೇ ಸ್ನೇಹಿತರು ಕಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಈತ ಮೃತಪಟ್ಟಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸಾವಿಗೆ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.

“ಈ ಅಮಾನುಷವಾದ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ” ಎಂದಿರುವ ಅಮಿತ್ ಶಾ, ತಮ್ಮ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಕೃತ್ಯಗಳ ಬಗ್ಗೆ ಪಿಣರಾಯಿ ವಿಜಯನ್ ಉತ್ತರ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ. ಆನಂದ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ  ಮತ್ತು ಆರೆಸ್ಸೆಸ್ ಜಂಟಿಯಾಗಿ ನವೆಂಬರ್ 13ರಂದು (ಇಂದು) ತ್ರಿಶೂರ್ ಬಂದ್ ಕರೆ ನೀಡಿದೆ. ಕೆಲವೇ ವಾರಗಳ ಹಿಂದೆಯಷ್ಟೇ ಅಮಿತ್ ಶಾ ಮತ್ತು ಕೇರಳ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಪಾದಯಾತ್ರೆ, ರ್ಯಾಲಿಯನ್ನು ನಡೆಸಿದ್ದರು. ಭಯೋತ್ಪಾದಕ ಕೃತ್ಯ, ರಾಜ್ಯದ ಕೊಲೆ ಪ್ರಕರಣಗಳ ಬಗ್ಗೆ ಈ ವೇಳೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.

ಆರೆಸ್ಸೆಸ್ ಕಾರ್ಯಕರ್ತನ ಸಾವಿನ ಹಿನ್ನೆಲೆಯಲ್ಲಿ ತ್ರಿಶೂರಿನಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದೇ ವೇಳೆ ಶನಿವಾರದಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯದ ಕೊಲೆ ಪ್ರಕರಣಗಳನ್ನು ಖಂಡಿಸಿ ಬೃಹತ್ ರ್ಯಾಲಿಯನ್ನೂ ಆಯೋಜಿಸಿದೆ.

ಮೃತ ಆನಂದನ್ 2013ರಲ್ಲಿ ನಡೆದಿದ್ದ ಸಿಪಿಐಎಂ ಕಾರ್ಯಕರ್ತ ಫಾಸಿಲ್ ಕೊಲೆ ಪ್ರಕರಣದ ಆರೋಪಿ.  ನವೆಂಬರಿನಲ್ಲಿ ಗುರುವಾಯೂರಿನ ಬ್ರಹ್ಮಕುಲಂನ ಕೀಯೂರು ಜಂಕ್ಷನಿನಲ್ಲಿ ತಂಡವೊಂದು ಫಾಸಿಲನನ್ನು ಇರಿದು ಹತ್ಯೆ ಮಾಡಿತ್ತು.