ರಾಜಕೋಟ್ ಸಹಕಾರಿ ಬ್ಯಾಂಕಿನಲ್ಲಿ ರೂ 871 ಕೋಟಿ ಮೋಸ ಹಗರಣ

ಸಾಂದರ್ಭಿಕ ಚಿತ್ರ

ಐಟಿ ತನಿಖೆಯಿಂದ ಬಹಿರಂಗ

ನವದೆಹಲಿ : ಗುಜರಾತ್ ರಾಜ್ಯದ ರಾಜಕೋಟ್ ಮೂಲದ ಸಹಕಾರಿ ಬ್ಯಾಂಕೊಂದರಲ್ಲಿ ನವೆಂಬರ್ 8ರ ನೊಟು ಅಮಾನ್ಯೀಕರಣದ ನಂತರ ರೂ 871 ಕೋಟಿ ಮೊತ್ತದ ಠೇವಣಿಗಳನ್ನು ಮಾಡಲಾಗಿರುವುದು, 4500ಕ್ಕೂ ಅಧಿಕ ಹೊಸ ಖಾತೆಗಳನ್ನು ತೆರೆಯಲಾಗಿರುವುದು ಹಾಗೂ  ಒಂದೇ ಮೊಬೈಲ್ ಸಂಖ್ಯೆಯಿರುವ ಐದು ಡಜನಿಗೂ ಹೆಚ್ಚು ಖಾತೆಗಳಿರುವುದು ಆದಾಯ ತೆರಿಗೆ ಇಲಾಖೆಯ ತನಿಖೆಯಿಂದ ತಿಳಿದುಬಂದಿದ್ದು ನೋಟು ರದ್ದತಿಯ ನಂತರದ ಅತಿ ದೊಡ್ಡ ಹಗರಣ ಇದಾಗಿದೆಯೆಂದು ಊಹಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಅಹ್ಮದಾಬಾದ್ ಘಟಕವು ತನಿಖೆಯನ್ನು ನಡೆಸುತ್ತಿದ್ದು ಸಂಪೂರ್ಣ ವಿವರಗಳನ್ನು ನೀಡುವಂತೆ ಬ್ಯಾಂಕಿಗೆ ಆದೇಶ ನೀಡಲಾಗಿದೆ. ಅಮಾನ್ಯೀಕರಣದ ನಂತರ ಈ ಬ್ಯಾಂಕಿನಲ್ಲಿಡಲಾದ ಹೆಚ್ಚಿನ ಠೇವಣಿಗಳು ಅಮಾನ್ಯಗೊಂಡ ರೂ 500 ಹಾಗೂ 1000 ಮುಖಬೆಲೆಯ ನೋಟುಗಳಿಂದಲೇ ನವೆಂಬರ್ 9 ಹಾಗೂ ಡಿಸೆಂಬರ್ 30ರ ನಡುವೆ ಬಂದಿದ್ದು ಇದೇ ಅವಧಿಯಲ್ಲಿ ರೂ 108 ಕೋಟಿ ಮೊತ್ತವನ್ನು ಸಂಶಯಾಸ್ಪದವಾಗಿ ಹಿಂಪಡೆಯಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಠೇವಣಿಯನ್ನು ಈ ಅವಧಿಯಲ್ಲಿ ಹಿಂದಿನ ವರ್ಷಗಳಲ್ಲಿ ಹಿಂಪಡೆದ ಉದಾಹರಣೆಗಳೇ ಇಲ್ಲ ಎಂಬುದು ಗಮನಾರ್ಹ.

ಸುಮಾರು ರೂ 30 ಕೋಟಿಗೂ ಅಧಿಕ ಹಣವನ್ನು ಠೇವಣಿಯಿರಿಸಿದ ಕನಿಷ್ಠ 25 ಪ್ರಕರಣಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರಲ್ಲದೆ, ಹಲವು ಸಮಯಗಳ ಕಾಲ ಸಕ್ರಿಯವಾಗಿಲ್ಲದ ಖಾತೆಗಳಲ್ಲೂ ರೂ 10 ಕೋಟಿ ಹಣವನ್ನು ಠೇವಣಿಯಿರಿಸಲಾಗಿದೆಯೆಂಬ ಬಗ್ಗೆ ಮಾಹಿತಿಯಿದೆ. ಪೆಟ್ರೋಲಿಯಂ ಸಂಸ್ಥೆಯೊಂದರ ಖಾತೆಯಲ್ಲಿ ರೂ 2.53 ಕೋಟಿ ಠೇವಣಿಯಿರಿಸಿದ ಬಗ್ಗೆಯೂ ಆದಾಯ ತೆರಿಗೆ ಇಲಾಖೆಗೆ ತಿಳಿದುಬಂದಿದೆ.

ಈ ಬ್ಯಾಂಕಿನಲ್ಲಿ ವರ್ಷವೊಂದರ ಅವಧಿಯಲ್ಲಿ ಸರಿಸುಮಾರು 5000 ಹೊಸ ಖಾತೆಗಳು ತೆರೆಯಲ್ಪಡುತ್ತಿದ್ದರೆ, ನೋಟು ಅಮಾನ್ಯೀಕರಣದ ನಂತರದ ಅಲ್ಪಾವಧಿಯಲ್ಲಿ 4,551 ಹೊಸ ಖಾತೆಗಳನ್ನು ತೆರೆಯಲಾಗಿದೆ ಎಂದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಖಾತೆಗಳಲ್ಲಿ ಒಟ್ಟು 62 ಖಾತೆಗಳ ವಿವರಗಳಲ್ಲಿ ಒಂದೇ ಮೊಬೈಲ್ ಸಂಖ್ಯೆ ನೀಡಲಾಗಿದೆಯೆಂದೂ ತಿಳಿದು ಬಂದಿದೆ.

ಬ್ಯಾಂಕಿನ ನಿರ್ದೇಶಕರೊಬ್ಬರ ಪುತ್ರನ 30 ಬ್ಯಾಂಕ್ ಖಾತೆಗಳಲ್ಲಿ ರೂ 1 ಕೋಟಿ ನಗದು ಠೇವಣಿಯಿರಿಸಲಾಗಿದೆಯೆಂದೂ ಬಹಿರಂಗಗೊಂಡಿದೆಯಲ್ಲದೆ ಎಲ್ಲಾ ಪೇ-ಇನ್-ಸ್ಲಿಪ್ ಒಬ್ಬನೇ ವ್ಯಕ್ತಿ ತುಂಬಿರುವುದು ಬೆಳಕಿಗೆ ಬಂದಿದೆ. ಈ ಬ್ಯಾಂಕಿನ ಉಪಾಧ್ಯಕ್ಷರ ತಾಯಿಯ ಖಾತೆಯಲ್ಲಿ ರೂ 64 ಲಕ್ಷ ನಗದು ಠೇವಣಿಯಿರಿಸಲಾಗಿದ್ದರೆ ಈ ಹಣವನ್ನು  ಅಂತಿಮವಾಗಿ ಜುವೆಲ್ಲರ್ ಒಬ್ಬರಿಗೆ ವರ್ಗಾಯಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.