ಬಿ ಸಿ ರೋಡು-ಜಕ್ರಿಬೆಟ್ಟು ಚತುಷ್ಪಥ ರಸ್ತೆಗೆ 70 ಕೋಟಿ ರೂ ಮಂಜೂರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಿ ಸಿ ರೋಡು-ಜಕ್ರಿಬೆಟ್ಟು ಚತುಷ್ಪಥ ರಸ್ತೆಯಾಗಿ ಅಭಿವೃದ್ದಿಗಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ 70 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಂಟ್ವಾಳ-ಚಾರ್ಮಾಡಿ ಹೆದ್ದಾರಿಯ ಮಧ್ಯೆ ಮೂರು ಸೇತುವೆಗಳಿಗೆ 19 ಕೋಟಿ ರೂಪಾಯಿ ಮಂಜೂರಾಗಿದ್ದು, ಇದರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಮಣಿಹಳ್ಳ ಸೇತುವೆಯೂ ಸೇರಿದೆ ಎಂದರು.

“ಬಹು ನಿರೀಕ್ಷಿತ ಯೋಜನೆಯಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂರನೇ ಯೋಜನೆ ಮಾಣಿಯಲ್ಲಿ ಎಪ್ರಿಲ್ 17ರಂದು ಶಿಲಾನ್ಯಾಸ ನೆರವೇರಲಿದೆ. ಈಗಾಗಲೇ ಕರೋಪಾಡಿ, ಸಂಗಬೆಟ್ಟುಗಳಲ್ಲಿ ಎರಡು ಯೋಜನೆಗಳು ಪೂರ್ಣಗೊಂಡಿದೆ. ಇದೀಗ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 16.46 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 17 ರಂದು ಶಿಲಾನ್ಯಾಸ ನೆರವೇರಲಿದೆ. ಈ ಯೋಜನೆಯಿಂದ ಮಾಣಿ, ಅನಂತಾಡಿ, ಪೆರಾಜೆ, ಬರಿಮಾರು, ಕಡೇಶ್ವಾಲ್ಯ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ನೀಗಲಿದೆ” ಎಂದರು.

ಬಂಟ್ವಾಳಕ್ಕೆ ಈಗಾಗಲೇ ಆರ್‍ಟಿಒ ಕಚೇರಿ ಮಂಜೂರಾಗಿದ್ದು, ಶೀಘ್ರ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವ ರೈ 60 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು. ಬೆಂಜನಪದವು ಎಂಬಲ್ಲಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಬಾಳ್ತಿಲದಲ್ಲಿ ಮೊರಾರ್ಜಿ ವಸತಿ ಶಾಲೆಯನ್ನು ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.