ಡೀಕೇಶಿ ಐಟಿ ದಾಳಿಯಲ್ಲಿ ರೂ 300 ಕೋಟಿ ಪತ್ತೆ ?

ಬೆಂಗಳೂರು : ಇಂಧನ ಸಚಿವ ಡೀಕೆ ಶಿವಕುಮಾರ್ ನಿವಾಸ ಮತ್ತು ಹಲವಾರು ಕಚೇರಿಗಳ ಮೇಲೆ ನಡೆದ ಐಟಿ ದಾಳಿಗಳಲ್ಲಿ  ಸುಮಾರು ರೂ 300 ಕೋಟಿಗಳಷ್ಟು ಅಕ್ರಮ  ಸಂಪತ್ತು ಪತ್ತೆಯಾಗಿವೆಯೆಂದು ತಿಳಿದುಬಂದಿದ್ದು, ಈ ಆಸ್ತಿಯಲ್ಲಿ ರೂ 100 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಶಿವಕುಮಾರ್ ಮತ್ತವರ ಕುಟುಂಬ ಸದಸ್ಯರಿಗೆ ಸೇರಿವೆಯೆಂದು ಹೇಳಲಾಗಿದೆ. ಉಳಿದ ರೂ 200 ಕೋಟಿ ಮೌಲ್ಯದ ಅಕ್ರಮ ಆದಾಯವು ವಿವಿಧ ಉದ್ಯಮ ಸಂಸ್ಥೆಗಳು ಹಾಗೂ ಡಿ ಕೆ ಶಿವಕುಮಾರ್ ಹೂಡಿಕೆ ಮಾಡಿರುವ  ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಸಾರಿಗೆ ಸಂಸ್ಥೆಗೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ.

ದಾಳಿ ವೇಳೆ ರೂ 15 ಕೋಟಿಗೂ ಅಧಿಕ ಮೌಲ್ಯದ ಒಡವೆಗಳು ಹಾಗೂ ಹಲವಾರು  ದಾಖಲೆಗಳು ಪತ್ತೆಯಾಗಿವೆ. ಪತ್ತೆಯಾದ ಒಟ್ಟು ಅಕ್ರಮ ಆಸ್ತಿ ಬಗ್ಗೆ  ವರದಿ ಸಿದ್ಧ್ದಪಡಿಸಲು ಆದಾಯ ತೆರಿಗೆ ನಿರ್ದೇಶನಾಲಯವು ಅಗತ್ಯ ಸಮಯ ತೆಗೆದುಕೊಳ್ಳುವುದು. ಅಕ್ರಮ ಹಣ ವಹಿವಾಟು ನಡೆದಿದೆ ಎಂದೇನಾದರೂ ತಿಳಿದು ಬಂದರೆ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವೂ ಭಾಗಿಯಾಗಲಿದೆ ಎಂದು ಹೇಳಲಾಗಿದೆ.