ತುಂಬೆ ಹೊಸ ವೆಂಟೆಡ್ ಡ್ಯಾಮಿನಿಂದ ಮುಳುಗಡೆ ಭೀತಿಯಲ್ಲಿರುವ ಕೃಷಿಕರ ಜಮೀನಿಗೆ ರೂ 3 ಕೋಟಿ ಪರಿಹಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತುಂಬೆಯ ಹೊಸ ವೆಂಟೆಡ್ ಡ್ಯಾಮಿನಲ್ಲಿ 5 ಮೀಟರ್ ನೀರು ಸಂಗ್ರಹಿಸಿದರೆ ಸ್ಥಳೀಯ 18 ರೈತರ 18.2 ಎಕ್ರೆ ಕೃಷಿ ಭೂಮಿ ಭಾಗಶಃ ಮುಳುಗಡೆಯಾಗುತ್ತದೆ ಎಂಬ ಭೀತಿಯಲ್ಲಿದ್ದ ರೈತರಿಗೆ ಕರ್ನಾಟಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅಭಯ ನೀಡಲಾಗಿದೆ. ಮುಳುಗಡೆ ಭೀತಿಯಲ್ಲಿರುವ ಸ್ಥಳೀಯ ರೈತರಿಗೆ 3 ಕೋಟಿ ರೂ ಪರಿಹಾರ ನೀಡಲಾಗುವುದು ಎಂದು ಸಭೆಯಲ್ಲಿ ಆಯಕ್ತ ಮೊಹಮ್ಮದ್ ನಝೀರ್ ಘೋಷಿಸಿದ್ದಾರೆ.

ಸಮೀಕ್ಷೆಗಳ ಪ್ರಕಾರ 30.64 ಎಕ್ರೆ ಭೂಮಿ ಮುಳುಗಡೆಯಾಗಲಿದೆ. ಇವುಗಳಲ್ಲಿ 18.12 ಎಕ್ರೆ ಭೂಮಿ ಸುಮಾರು 18 ರೈತರಿಗೆ ಸೇರಿದ ಖಾಸಗಿ ಭೂಮಿ. ಉಳಿದದ್ದು ಸರ್ಕಾರಿ ಭೂಮಿ.

ಮಹಾ ನಗರಪಾಲಿಕೆಯು ರೈತರಿಗೆ ಪರಿಹಾರವನ್ನು ಪಾವತಿಸುವ ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ. ಇದೀಗ ಪೌರ ಪ್ರತಿನಿಧಿಗಳು ಪರಿಹಾರ ನಿಧಿಯಿಂದ ಮೊತ್ತ ಡ್ರಾ ಮಾಡುತ್ತಾರೆ, ನಂತರ ಸರ್ಕಾರ ಏಸಿಯನ್ ಅಭಿವೃದ್ಧಿ ಬ್ಯಾಂಕ್ ಸಾಲ ಯೋಜನೆಯಡಿಯಲ್ಲಿ ಆ ಮೊತ್ತವನ್ನು ಮರುತುಂಬಲಿದೆ. ಪರಿಹಾರ ಪಾವತಿಸಿದ ಬಳಿಕ ಡ್ಯಾಮಿನಲ್ಲಿ ನೀರು ತುಂಬಿಸುವ ಕೆಲಸ ಈ ಬೇಸಿಗೆಯಿಂದ ಆರಂಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.