ಪತಂಜಲಿಗೆ ರೂ 11 ಲಕ್ಷ ದಂಡ

ದಾರಿ ತಪ್ಪಿಸುವ ಜಾಹೀರಾತು

ಡೆಹ್ರಾಡೂನ್ : ತನ್ನ ಉತ್ಪನ್ನಗಳ ಬಗ್ಗೆ ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡಿದ ತಪ್ಪಿಗೆ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಐದು ಉತ್ಪಾದನಾ ಘಟಕಗಳಿಗೆ ಹರಿದ್ವಾರದ ನ್ಯಾಯಾಲಯವೊಂದು ರೂ 11 ಲಕ್ಷ ದಂಡ ವಿಧಿಸಿದೆ. ದಂಡ ಮೊತ್ತವನ್ನು ಒಂದು ತಿಂಗಳೊಳಗಾಗಿ ಪಾವತಿಸುವಂತೆ ಸಂಸ್ಥೆಗೆ ನ್ಯಾಯಾಲಯ ಆದೇಶಿಸಿದೆ.

“ತನ್ನ ಉತ್ಪನ್ನಗಳನ್ನು ಪತಂಜಲಿ ತಪ್ಪಾಗಿ ಬ್ರ್ಯಾಂಡ್ ಮಾಡಿದೆ.  ಜಾಹೀರಾತಿನಲ್ಲಿ ಉತ್ಪನ್ನಗಳು ತನ್ನ ಉತ್ಪಾದನಾ ಘಟಕದಲ್ಲಿಯೇ ತಯಾರಾಗುತ್ತಿವೆ ಎಂದು ಪತಂಜಲಿ ಹೇಳಿದೆಯಾದರೂ ವಾಸ್ತವವಾಗಿ ಈ ಉತ್ಪನ್ನಗಳು ಬೇರೆಲ್ಲೋ ತಯಾರಾಗಿವೆ” ಎಂದು ನ್ಯಾಯಾಲಯ ಹೇಳಿದೆ.

ಪತಂಜಲಿಯ ಸಾಸಿವೆ ಎಣ್ಣೆ, ಉಪ್ಪು,  ಅನಾನಸು ಜ್ಯಾಮ್, ಕಡಲೆ ಹಿಟ್ಟು ಮತ್ತು ಜೇನುತುಪ್ಪ ಉತ್ಪನ್ನಗಳು ರುದ್ರಾಪುರ ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ನಂತರ ಕಂಪೆನಿಯ ವಿರುದ್ಧ 2012ರಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಕೋರ್ಟ್ ಮೆಟ್ಟಿಲೇರಿತ್ತು.  ಈ ಉತ್ಪನ್ನಗಳು  ಆಹಾರ ಸುರಕ್ಷತಾ ನಿಯಮಾವಳಿಯ ಸೆಕ್ಷನ್ 52-53  ಹಾಗೂ ಆಹಾರಸುರಕ್ಷತೆ ಮತ್ತು ಗುಣಮಟ್ಟ ನಿಯಮದ(ಪ್ಯಾಕೇಜಿಂಗ್ ಮತ್ತು ಲೇಬಲ್ಲಿಂಗ್) ಇದರ ಸೆಕ್ಷನ್ 23.1(5)  ಉಲ್ಲಂಘಿಸಿವೆಯೆಂದು ಸಾಬೀತಾಗಿದೆ.