ಪಿಯುಸಿಎಲ್ ಕಾರ್ಯಕರ್ತ ಕಬೀರ್ ಉಳ್ಳಾಲ ಮೇಲಿನ ರೌಡಿ ಶೀಟ್ ಮುಚ್ಚಿದ ಪೊಲೀಸರು

ಕರಾವಳಿ ಅಲೆ  ವರದಿ

ಮಂಗಳೂರು : ಉಳ್ಳಾಲ ಠಾಣೆ ಪೊಲೀಸರು ಮಾನವ ಹಕ್ಕು ಸಂಘಟನೆಯಾದ ಪಿಯುಸಿಲ್ ಸಂಸ್ಥೆಯ ಕಾರ್ಯಕರ್ತ ಕಬೀರ್ ಉಳ್ಳಾಲ ವಿರುದ್ಧ  ಅಕ್ಟೋಬರ್ 30, 2008ರಂದು ತೆರೆದಿದ್ದ ರೌಡಿ ಶೀಟನ್ನು ಹೈಕೋರ್ಟ್ ಹೊರಡಿಸಿದ ಆದೇಶದನ್ವಯ ಮುಚ್ಚಿದ್ದಾರಲ್ಲದೆ ತಾವು ಕೈಗೊಂಡ ಕ್ರಮದ ಬಗ್ಗೆ ವರದಿಯನ್ನೂ  ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಉಳ್ಳಾಲ ಇನಸ್ಪೆಕ್ಟರ್ ಮದನ್ ಗಾಂವ್ಕರ್ `ಕರಾವಳಿ ಅಲೆ’ಗೆ ತಿಳಿಸಿದ್ದಾರೆ.

ಪೊಲೀಸರು 2008ರಲ್ಲಿ ಸಂಘ ಪರಿವಾರವನ್ನು ಓಲೈಸುವ ಉದ್ದೇಶದಿಂದಲೇ ಕಬೀರ್ ವಿರುದ್ಧ ರೌಡಿ ಶೀಟ್ ತೆರೆದಿದ್ದರೆಂದು ಆರೋಪಿಸಲಾಗಿತ್ತು. ಆ ಸಂದರ್ಭ ಜಿಲ್ಲೆಯಲ್ಲಿ ಮತೀಯ ಉದ್ವಿಗ್ನತೆಯಿದ್ದ ಕಾರಣ ಕಬೀರ್ ಅಲ್ಪಸಂಖ್ಯಾತರ ಪರವಾಗಿ ದನಿಯೆತ್ತಿದ್ದರು. ಅದು ಸಹಜವಾಗಿ ಆರೆಸ್ಸೆಸ್ ಹಾಗೂ ಪರಿವಾರ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಆಗಿನ ವೃತ್ತ ನಿರೀಕ್ಷಕ ಜಯಂತ್ ಹಾಗೂ ಎಸ್ಸೈ ಶಿವಪ್ರಕಾಶ್ ರೌಡಿ ಶೀಟ್ ತೆರೆದ ನಂತರ ಸಾಕಷ್ಟು ಕಷ್ಟ ಅನುಭವಿಸಿದ್ದ ಕಬೀರ್ ಪೊಲೀಸ್ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟಿನ ಮೊರೆ ಹೋಗಿದ್ದರು. ಪಿಯುಸಿಲ್ ತಮಗೆ ವಹಿಸಿದ್ದ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಕಬೀರಗೆ ಪಿಯುಸಿಲ್ ಕೂಡ ಅವರ ಕಾನೂನು ಹೋರಾಟದಲ್ಲಿ ಸಾಥ್ ನೀಡಿತ್ತು.

ಕಬೀರ್ ಪರ ವಾದಿಸಿದ ವಕೀಲ ಬಾಲನ್, ಅವರ ವಿರುದ್ಧದ ಆರೋಪ ಸತ್ಯಕ್ಕೆ ದೂರವಾಗಿದ್ದು ಹಾಗೂ ಅವರ ವಿರುದ್ಧ 4 ವರ್ಷದಿಂದ ಒಂದೇ ಒಂದು ಪ್ರಕರಣ ದಾಖಲಿಸಲ್ಪಟ್ಟಿಲ್ಲ ಎಂದು ಹೇಳಿದ್ದರು. ಶಾಲಾ ಬಾಲಕನ ಮೇಲಿನ ಹಲ್ಲೆ ಪ್ರಕರಣದಲ್ಲಿ ಆಗಿನ ಉಳ್ಳಾಲ ಎಸ್ಸೈ ಪ್ರಕಾಶ್ ವಿರುದ್ಧ ಕಬೀರ್ ಹೋರಾಡಿದ್ದರಲ್ಲದೆ ಮಾನವ ಹಕ್ಕು ಆಯೋಗ ಪೊಲೀಸ್ ಅಧಿಕಾರಿಗೆ ದಂಡÀವನ್ನೂ ವಿಧಿಸಿತ್ತು. ಗ್ಯಾಸ್ ಏಜನ್ಸಿ ಮಾಫಿಯಾ ವಿರುದ್ಧವೂ ಅವರು ನಡೆಸಿದ್ದ ಹೋರಾಟದ ಬಗ್ಗೆಯೂ ನ್ಯಾಯಾಲಯದ ಗಮನ ಸೆಳೆಯಲಾಗಿದ್ದು, ಇವುಗಳನ್ನೆಲ್ಲಾ ಪರಿಗಣಿಸಿದ ನ್ಯಾಯಾಲಯ ಜುಲೈ 9, 2012ರಂದು ಅವರ ವಿರುದ್ಧದ ರೌಡಿ ಶೀಟ್ ಮುಚ್ಚುವಂತೆ ಆದೇಶಿಸಿತ್ತು.

 

LEAVE A REPLY