ರೌಡಿ ಪ್ರವೀಣ್ ಬರ್ಬರ ಹತ್ಯೆ

ಜಿ ಪಂ ಸದಸ್ಯ ಸುಮಿತ್ ಶೆಟ್ಟಿ ಕೊಲೆಯತ್ನ ಆರೋಪಿಯಾಗಿದ್ದ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಬೈಲೂರು ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೊಲೆಯತ್ನದ ಆರೋಪಿ ರೌಡಿಶೀಟರ್ ಒರುವಾಡಿ ಪ್ರವೀಣ್ ಕುಲಾಲ್ ಎಂಬಾತನನ್ನು ಹಿರಿಯಡ್ಕ ಬಾರ್ ಒಂದರ ಬಳಿ ಆತನ ಸ್ನೇಹಿತರು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಹಿರಿಯಡ್ಕ ಪುತ್ತಿಗೆ ನಿವಾಸಿ ಸಂತೋಷ್ ಶೇರಿಗಾರ್  ಪಡುಬಿದ್ರಿ ಸಮೀಪದ ಪಲಿಮಾರು ನಿವಾಸಿ ರಿತೇಶ್  ಹಿರಿಯಡ್ಕ ಸಮೀಪದ ಓಂತಿಬೆಟ್ಟು ಗ್ರಾಮದ ಮಾಬೆಟ್ಟು ನಿವಾಸಿ ಸಂತೋಷ್ ಶೆಟ್ಟಿ ಎಂಬವರು ಕೊಲೆ ಆರೋಪಿಗಳು ಎಂದು ತಿಳಿದುಬಂದಿದೆ ರೌಡಿಶೀಟರ್ ಕಣಜಾರು ಸಮೀಪದ ಒರುವಾಡಿ ಎಂಬಲ್ಲಿನ ಪ್ರವಿಣ್ ಕುಲಾಲ್ ತನ್ನ ಸ್ನೇಹಿತರೊಂದಿಗೆ ಹಿರಿಯಡ್ಕದ ಕೋಟ್ನಕಟ್ಟೆ ಎಂಬಲ್ಲಿನ ದಿಯಾ ಬಾರಿನಲ್ಲಿ ಸೋಮವಾರ ಮಧ್ಯಾಹ್ನ ಮದ್ಯಸೇವನೆಗೆ ಬಂದಿದ್ದರು. ಮಧ್ಯಾಹ್ನ ಸುಮಾರು 1.30ರ ವೇಳೆಗೆ ಊಟ ಮುಗಿಸಿ ಬಾರಿನಿಂದ ಪ್ರವೀಣ್ ಕುಲಾಲ್ ಹೊರಬರುತ್ತಿದ್ದಂತೆಯೇ ಹಿಂದಿನಿಂದ ಬಂದ ಸಂತೋಷ್ ಮತ್ತಿತರರು ತಲವಾರಿನಿಂದ ಪ್ರವೀಣ್ ತಲೆಗೆ ಕಡಿದ ಪರಿಣಾಮ ಆತ ಕುಸಿದು ಬೀಳುತ್ತಿದ್ದಂತೆಯೇ ಮತ್ತೆ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು. ಮೂಲಗಳ ಪ್ರಕಾರ ಪ್ರವೀಣ್ ಕೊಲೆ ಪೂರ್ವನಿಯೋಜಿತ ಕೃತ್ಯವಾಗಿದ್ದು  ಕೊಲೆಯ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ
ರೌಡಿಶೀಟರ್ ಒರುವಾಡಿ ಪ್ರವೀಣ್ ಕುಲಾಲ್ ನಟೋರಿಯಸ್ ರೌಡಿಯಾಗಿದ್ದು, ಕಳೆದ 2011ರ ನವೆಂಬರಿನಲ್ಲಿ ಪಳ್ಳಿಯಲ್ಲಿ ನಡೆದ ರೌಡಿಶೀಟರ್ ಸುಲೈಮಾನ್ ಕೊಲೆಯ ಪ್ರಮುಖ ಆರೋಪಿಯಾಗಿದ್ದ. ಅಲ್ಲದೇ ಎರಡು ತಿಂಗಳ ಹಿಂದೆ ಹಣಕಾಸಿನ ವಿಚಾರವಾಗಿ ಬೈಲೂರು ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಮೇಲೆ ಪ್ರವೀಣ್ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ  ಈ ಪ್ರಕರಣದಲ್ಲಿ ಸುಮಿತ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾದರೆ ಪ್ರವೀಣ್ ಸಹಚರರು ಸುಮಿತ್ ಬೆಂಬಲಿಗರ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದರು. ಈ ಪ್ರಕರಣದ ಕುರಿತಂತೆ ಪ್ರವೀಣ್ ಮೈಸೂರಿನ ಜೈಲಿನಿಂದ ಬಿಡುಗಡೆಯಾಗಿ ಇತ್ತೀಚೆಗಷ್ಟೆ ಹೊರಬಂದಿದ್ದ. ಆತ ಜೈಲಿನಿಂದ ಬಂದು ತಿಂಗಳೊಳಗಾಗಿ ಕೊಲೆಯಾಗಿ ಹೋಗಿದ್ದು, ಈತನ ಕೊಲೆಗೆ ಭೂಗತ ಜಗತ್ತಿನ ಕೈವಾಡದ ಶಂಕೆ ಮೂಡಿದೆ. ಆದರೆ ನಿಖರ ಕಾರಣವೇನೆಂದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ