ರೌಡಿ ಕಾಲಿಯಾ ರಫೀಕ್ ಬರ್ಬರ ಹತ್ಯೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಸೋಮೇಶ್ವರದ ಬಳಿ ಉಪ್ಪಳ ನಿವಾಸಿ ರೌಡಿಶೀಟರ್ ಕಾಲಿಯಾ ರಫೀಕ(35)ನನ್ನು ದುಷ್ಕರ್ಮಿಗಳು ಕೋಟೆಕಾರು ಬಳಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಕಾಲಿಯಾ ರಫೀಕ್ ತನ್ನ ಮೂವರು ಸ್ನೇಹಿತರ ಜೊತೆಗೆ ರಾತ್ರಿ 3 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮೇಶ್ವರದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ದುಷ್ಕರ್ಮಿಗಳು ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆಸಿ, ಅಡ್ಡಗಟ್ಟಿದರು. ಈ ವೇಳೆ ಕಾರಿನಿಂದ ಇಳಿದು ಓಡಲು ಯತ್ನಿಸುತ್ತಿದ್ದ ರಫೀಕ್ ಮೇಲೆ ಗುಂಡು ಹಾರಿಸಿದರು. ಅಷ್ಟೇ ಅಲ್ಲದೆ ದುಷ್ಕರ್ಮಿಗಳು ತಲ್ವಾರಿನಿಂದ ಯದ್ವಾತದ್ವಾ ಕಡಿದು ಕೊಲೆ ಮಾಡಿದ್ದಾರೆ.

2 3 4

ಕಾರಿನಲ್ಲಿದ್ದ ಸಂಬಂಧಿ ಜಾಹೀದ್ ಕೊಲೆ ಕೃತ್ಯವನ್ನು ತಡೆಯಲು ಬಂದಿದ್ದು, ದುಷ್ಕರ್ಮಿಗಳು ಜಾಹೀದ್ ಮೇಲೂ ತಲ್ವಾರಿನಿಂದ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ.

ಕರ್ನಾಟಕ ಮತ್ತು ಕೇರಳ ರಾಜ್ಯದ ಹಲವು ಕಡೆಗಳಲ್ಲಿ ನಡೆದಿರುವ ಕೊಲೆ, ಕೊಲೆಯತ್ನ, ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಕಾಲಿಯಾ ರಫೀಕ್ ಮೇಲೆ ಈ ಹಿಂದೆ ಕೂಡಾ ಕೊಲೆ ಯತ್ನ ನಡೆದಿತ್ತು. ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು.