ಕಾರ್ಕಳ ಅನಂತಶಯನ ದೇಗುಲ ಆಡಳಿತ ವಿವಾದ

ಉಡುಪಿ : ಕಾರ್ಕಳದಲ್ಲಿರುವ ಇತಿಹಾಸ ಪ್ರಸಿದ್ಧ ಅನಂತಶಯನ ಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಯಾರಿಗೆ ಸೇರಿದ್ದು ಎನ್ನುವ ವಿಚಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮತ್ತು ಕಾರ್ಕಳ ತಾಲೂಕು ಬ್ರಾಹ್ಮಣರ ಸಂಘದವರ ಮಧ್ಯೆ ಇದೀಗ ವಿವಾದ ತಲೆದೋರಿದೆ.

ಈ ವಿಷಯದಲ್ಲಿ ಇವೆರಡರ ನಡುವೆ ಕಾನೂನು ಸಮರ ಪ್ರಾರಂಭಗೊಂಡಿದೆ. ವಿಷಯ ಹೈಕೋರ್ಟ್ ಮೆಟ್ಟಲೇರಿದೆ. ಈ ನಡುವೆ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನೂ ನೇಮಕ ಮಾಡಿ ಇಲಾಖೆಯ ಸಹಾಯಕ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ.

ಧಾರ್ಮಿಕ ದತ್ತಿ ಇಲಾಖೆಯ ಸಿ ವರ್ಗದ ಪಟ್ಟಿಯಲ್ಲಿ ಈ ದೇವಸ್ಥಾನವು ಬರುತ್ತಿದ್ದು, ಆಡಳಿತ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟ ಮಾಹಿತಿ 25 ರಿಜಿಸ್ಟರಿನಲ್ಲಿದೆ. ಆದರೆ ದೇವಸ್ಥಾನದ ಆಡಳಿತ ತಮಗೆ ಸೇರಿದ್ದು ಎಂದು ಇದನ್ನು ಪೂಜಿಸಿಕೊಂಡು ಬರುತ್ತಿದ್ದ ಬ್ರಾಹ್ಮಣ ಸಂಘದವರು ಪ್ರತಿಪಾದಿಸುತ್ತಿದ್ದಾರೆ.

ದೇವಸ್ಥಾನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದೆಂದು ಘೋಷಿಸಿ ಎಂದು ರಾಜ್ಯ ಧಾರ್ಮಿಕ ಪರಿಷತ್ತಿಗೆ ಸಂಘವು ಅರ್ಜಿ ಸಲ್ಲಿಸಿದೆ. ಈ ವಿಚಾರ ಕೂಡಾ ವಿಚಾರಣೆ ಹಂತದಲ್ಲಿದೆ. ಆದರೆ ದೇವಸ್ಥಾನದ ರಿಜಿಸ್ಟರಿನಲ್ಲಿ ದಾಖಲಾದಂತೆ ದೇವಸ್ಥಾನದ ಆಡಳಿತವು ಏಳು ಮಾಗಣಿ ಭಜಕ ಸಮಾಜಕ್ಕೆ ಸೇರಿದ್ದು ಎಂದು ನಮೂದಾಗಿದೆ.

ದೇವಸ್ಥಾನದ ಎಲ್ಲಾ ಚಟುವಟಿಕೆಗಳೂ ಸುಸೂತ್ರವಾಗಿಯೇ ಸಾಗುತ್ತಿದ್ದವು. ಆದರೆ ಧಾರ್ಮಿಕ ಪರಿಷತ್ತಿನಲ್ಲಿ ಅರ್ಜಿ ವಿಚಾರಣೆಗೆ ಬಾಕಿ ಇದ್ದ ಕಾರಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆ ಆಗಿರಲಿಲ್ಲ. ಈ ಮಧ್ಯೆಯೇ ದೇವಸ್ಥಾನದ ಆಡಳಿತವು ತಮ್ಮದೆಂದು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ವಿವಾದ ಹುಟ್ಟುಕೊಂಡಿತ್ತು.