ಗೋವಾ ಕ್ಯಾಥೊಲಿಕ್ ಚರ್ಚಿಗೆ ಐಟಿ ನೋಟಿಸ್ ವಿವಾದಕ್ಕೆ ಹಾದಿ

ಗೋವಾದ ಚರ್ಚುಗಳನ್ನೇ ಗುರಿಯಾಗಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ರಾಜ್ಯಸಭೆಯ ಸಂಸದ ಶಾಂತಾರಾಂ  ನಾಯಕ್, ಚರ್ಚ್‍ಗಳನ್ನೂ ಹಿಂದೂ ದೇವಾಲಯಗಳಂತೆ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದಾರೆ.

  • ಪಮೆಲಾ ಡಿ’ಮೆಲೋ

ನವಂಬರ್ 8ರಂದು ಕೇಂದ್ರ ಸರ್ಕಾರ 500 ಮತ್ತು 1000 ರೂ ಮೌಲ್ಯದ ನೋಟುಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಗೋವಾದ ಆರ್ಚಡಯೋಸಿಸ್ಸಿಗೆ ನೋಟಿಸ್ ಕಳುಹಿಸಿರುವುದು ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿರುವ ರಾಜ್ಯದಲ್ಲಿ ಈ ಕ್ರಮದಿಂದ ರಾಜಕೀಯ ಸಂಚಲನ ಮೂಡಿದೆ. ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ಸಂಸ್ಥೆಗಳ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಚರ್ಚಿನ ನಗದು ಮೊತ್ತ, ಚರ್ಚ್ ಬಳಿ ಇರುವ ಅಮಾನ್ಯೀಕರಣಗೊಂಡ ನೋಟುಗಳ ಮೊತ್ತ ಮತ್ತು ಇತರ ವಿವರಗಳನ್ನು ಕೇಂದ್ರಕ್ಕೆ ಒದಗಿಸಲು ಕೇವಲ ಒಂದು ದಿನದ ಕಾಲಾವಕಾಶ ನೀಡಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 133(6) ಅಡಿಯಲ್ಲಿ ನೋಟಿಸ್ ಜಾರಿಮಾಡಲಾಗಿದೆ. ಗೋವಾದ ಎಲ್ಲ ಚರ್ಚುಗಳೂ ಆರ್ಚಡಯೋಸಿಸ್ ವ್ಯಾಪ್ತಿಗೆ ಒಳಪಡುತ್ತವೆ.

ದೇಶಾದ್ಯಂತ ಆದಾಯ ತೆರಿಗೆ ಇಲಾಖೆ ಎಲ್ಲ ರೀತಿಯ ಟ್ರಸ್ಟ್ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ನೋಟಿಸ್ ಜಾರಿಮಾಡಿದ್ದು ಗೋವಾದಲ್ಲಿ ಮಾತ್ರ ಕೇವಲ ಕ್ಯಾಥೊಲಿಕ್ ಚರ್ಚಿಗೆ ನೋಟಿಸ್ ಜಾರಿ ಮಾಡಿರುವುದು ವಿವಾದಾಸ್ಪದವಾಗಿದೆ. “ಒಂದೇ ದಿನದಲ್ಲಿ ನಮ್ಮ ಧಾರ್ಮಿಕ ಸಂಸ್ಥೆಗಳ ಸಮಸ್ತ ವಿವರಗಳನ್ನು ಕೇಳುವುದರ ಮೂಲಕ ಕೇಂದ್ರ ಸರ್ಕಾರ ತನ್ನ ತಾರತಮ್ಯ ನೀತಿಯನ್ನು ಪ್ರದರ್ಶಿಸಿದೆ” ಎಂದು ಕಾಂಗ್ರೆಸ್ ವಕ್ತಾರ ಸುನಿಲ್ ಕಾತಂಕರ್ ಹೇಳಿದ್ದಾರೆ. ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಒಂದನೆಯ ವೃತ್ತ ಕಚೇರಿಯಿಂದ ಜಾರಿಮಾಡಲಾಗಿರುವ ನೋಟಿಸಿನಲ್ಲಿ ಆರ್ಚಡಯೋಸಿಸ್ಸಿಗೆ ಸಂಸ್ಥೆಯ ಬಳಿ ಇರುವ ನಗದು ಮೊತ್ತ, ಸಂಬಂಧಿತ ಟ್ರಸ್ಟ್, ಸೊಸೈಟಿ  ಮತ್ತು ಸಂಘಟನೆಗಳ ಬಳಿ ಇರುವ ನಗದು ಮೊತ್ತದ ವಿವರಗಳನ್ನು ಕೂಡಲೇ ಒದಗಿಸುವಂತೆ ಆದೇಶಿಸಲಾಗಿದೆ. ನವಂಬರ್ 7, 8 ಮತ್ತು  9ರಂದು ಹೊಂದಿದ್ದ ನಗದು ಮೊತ್ತದ ಪ್ರಮಾಣವನ್ನು ಘೋಷಿಸಲು ಆದೇಶಿಸಲಾಗಿದೆ. ಆದರೆ ನಿಯತಕಾಲಿಕವಾಗಿ ಸರ್ಕಾರಕ್ಕೆ ಎಲ್ಲ ಆದಾಯದ ವಿವರಗಳನ್ನೂ ಒದಗಿಸುತ್ತಿರುವ ಕ್ರೈಸ್ತ ಸಂಸ್ಥೆ ಆದಾಯ ತೆರಿಗೆ ಇಲಾಖೆಯ ಆದೇಶಗಳನ್ನು ಪಾಲಿಸಲು ಸಿದ್ಧವಾಗಿರುವುದಾದರೂ ಸಕಲ ವಿವರಗಳನ್ನು ಒದಗಿಸಲು ಕಾಲಾವಕಾಶವೂ ಬೇಕಾಗುತ್ತದೆ, ಇಲಾಖೆ ಬಯಸಿದಂತೆ ಒಂದೇ ದಿನದ ಅವಧಿಯಲ್ಲಿ  ನೂರಕ್ಕೂ ಹೆಚ್ಚು ಸಂಸ್ಥೆಗಳ ಎಲ್ಲ ವಿವರಗಳನ್ನೂ ಒದಗಿಸುವುದು ಸಾಧ್ಯವಾಗದು ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಈಗಾಗಲೇ ಆರ್ಚಡಯೋಸಿಸ್ಸಿನ ಸಂಸ್ಥೆಗಳ ಸಭೆಗಳನ್ನು ಆಯೋಜಿಸಲಾಗಿದ್ದು ಮಾಹಿತಿ ಸಂಗ್ರಹ ಕಾರ್ಯ ಆರಂಭವಾಗಿದೆ. ಜಿಲ್ಲಾ ಮಟ್ಟದ ಪ್ಯಾರಿಷ್ ಸಂಸ್ಥೆಗಳು ತಮ್ಮ ವಿವರಗಳನ್ನು ಒದಗಿಸಲಿವೆ ಎಂದು ಚರ್ಚ್ ಮೂಲಗಳು ತಿಳಿಸಿವೆ.

ಕ್ಯಾಥೊಲಿಕ್ ಚರ್ಚುಗಳಲ್ಲಿ ಸಾಮಾನ್ಯವಾಗಿ ಭಾನುವಾರದ ಪ್ರಾರ್ಥನಾ ಸಭೆಗಳ ಸಂದರ್ಭದಲ್ಲಿ ಹಣ ಸಂಗ್ರಹ ಮಾಡಲಾಗುತ್ತದೆ. ಈ  ಹಣವನ್ನು ಸಂಸ್ಥೆಯ ನಿರ್ವಹಣೆ, ಸಾರ್ವಜನಿಕ ಖರ್ಚುವೆಚ್ಚ, ಮತ್ತು ಆಡಳಿತ ವೆಚ್ಚಗಳಿಗೆ ಉಪಯೋಗಿಸಲಾಗುತ್ತದೆ. ಅಮಾನ್ಯೀಕರಣದ ಪರಿಣಾಮ ಈ ವಾರದ ಸಂಗ್ರಹದಲ್ಲಿ ಕುಸಿತ ಕಂಡುಬಂದಿದೆ ಎಂದು ಚರ್ಚ್ ಅಧಿಕಾರಿಗಳು ಹೇಳಿದ್ದಾರೆ.

ಇತರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಈ ರೀತಿಯ ನೋಟಿಸ್ ಜಾರಿ ಮಾಡದೆ ಕೇವಲ ಕ್ರೈಸ್ತ ಸಂಸ್ಥೆಗಳಿಗೆ ಮಾತ್ರವೇ ಜಾರಿ ಮಾಡಿರುವುದರ ಔಚಿತ್ಯವನ್ನು ಗೋವನ್ ಮುಂತಾದ ಪತ್ರಿಕೆಗಳಲ್ಲಿ ಪ್ರಶ್ನಿಸಲಾಗಿದೆ.

ಸಾಂಪ್ರದಾಯಿಕವಾಗಿ ಕಪ್ಪುಹಣವನ್ನೇ ವೆಚ್ಚ ಮಾಡುತ್ತಿರುವ ಸ್ಥಳಗಳನ್ನು ಸರ್ಕಾರ ಏಕೆ ನಿರ್ಲಕ್ಷಿಸುತ್ತಿದೆ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ. ಕ್ಯಾಸಿನೋ ಉದ್ಯಮಗಳಿಗೆ ಇದೇ ರೀತಿಯ ನೋಟಿಸ್ ಜಾರಿ ಮಾಡಿರುವುದರ ಬಗ್ಗೆ ಸರ್ಕಾರದ ಯಾವುದೇ ವಕ್ತಾರರು ಮಾಹಿತಿ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಸಂಪಾದಕರು ಕಪ್ಪುಹಣವನ್ನು ಭೇಧಿಸುವುದರಲ್ಲಿ ಯಾವುದೇ ತಾರತಮ್ಯ ಅಥವಾ ಪಕ್ಷಪಾತ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದಾಗಿ ನಿರೂಪಿಸುವುದು ಆದಾಯ ತೆರಿಗೆ ಇಲಾಖೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಕಾನೂನು ಮತ್ತು ನಿಯಮಗಳನ್ನು ಕೆಲವೇ ಧಾರ್ಮಿಕ ಸಂಸ್ಥೆಗಳನ್ನು ಹಿಂಸಿಸಲು ಪ್ರಯೋಗಿಸದೆ ಸರಿಯಾದ ಸ್ಥಳಗಳಲ್ಲಿ ಸೂಕ್ತ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ ಎಂದು ನಿರೂಪಿಸುವ ಹೊಣೆಗಾರಿಕೆಯೂ ಇಲಾಖೆಯ ಮೇಲಿದೆ ಎಂದು ಸಂಪಾದಕೀಯದಲ್ಲಿ ಕಟುವಾಗಿ ಹೇಳಲಾಗಿದೆ. ಯಾವುದೇ ಹಿಂದೂ ದೇವಾಲಯಗಳಿಗೆ ಈ ರೀತಿಯ ನೋಟಿಸ್ ಜಾರಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ ಏಕೆಂದರೆ ಬಹುಪಾಲು ಹಿಂದೂ ದೇವಾಲಯಗಳು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವುದೇ ಇಲ್ಲ. ಗೋವಾದ ಚರ್ಚುಗಳನ್ನೇ ಗುರಿಯಾಗಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ರಾಜ್ಯಸಭೆಯ ಸಂಸದ ಶಾಂತಾರಾಂ  ನಾಯಕ್, ಚರ್ಚ್‍ಗಳನ್ನೂ ಹಿಂದೂ ದೇವಾಲಯಗಳಂತೆ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದಾರೆ.