ಬಂಗಾಳದಲ್ಲಿ ಅತ್ಯಾಚಾರಕ್ಕೆ ಒಳಗಾಗದೆ 15 ದಿನ ಕಳೆಯಲು ಸಾಧ್ಯವಿಲ್ಲ : ರೂಪಾ

ಮಹಿಳೆಯರು ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರಕ್ಕೆ ಒಳಗಾಗದೆ 15 ದಿನಗಳನ್ನು ಕಳೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕಿ ರೂಪಾ ಗಂಗೂಲಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸೆ ಭುಗಿಲೆದ್ದಿರುವ ಸಂದರ್ಭದಲ್ಲಿ ಬಿಜೆಪಿ ಸಂಸದೆ ರೂಪಾ ಗಂಗೂಲಿ ಈ ಹೇಳಿಕೆ ನೀಡಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವ ಮಂದಿ ತಮ್ಮ ಕುಟುಂಬಗಳ ಮಹಿಳೆಯರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸುವಂತೆ ರೂಪಾ ಗಂಗೂಲಿ ಸವಾಲೊಡಿದ್ದಾರೆ. “ನಿಮ್ಮ ಕುಟುಂಬದ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗದೆ 15 ದಿನಗಳನ್ನು ಕಳೆದರೆ ನೋಡಿ” ಎಂದು ರೂಪಾ ಗಂಗೂಲಿ ಹೇಳಿದ್ದಾರೆ. `ಬಂಗಾಳ ಉಳಿಸಿ’ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಟಿಎಂಸಿ ಸಚಿವ ಸೊವನದೇಬ್ ಚಟರ್ಜಿ, “ಬಂಗಾಳದಲ್ಲಿ ರೂಪಾ ಗಂಗೂಲಿ ಮೇಲೆ ಎಷ್ಟು ಬಾರಿ ಅತ್ಯಾಚಾರವಾಗಿದೆ” ಎಂದು ಪ್ರಶ್ನಿಸಿದ್ದಾರೆ. “ರೂಪಾ ತಮ್ಮದೇ ತಾಯ್ನಾಡಿಗೆ ಅವಹೇಳನ ಮಾಡಿದ್ದಾರೆ. ಆಕೆಯದು ಅಗ್ಗದ ಪ್ರಚಾರದ ತಂತ್ರ” ಎಂದು ಸೊವನದೇಬ್ ಹೇಳಿದ್ದಾರೆ.

ರೂಪಾ ಗಂಗೂಲಿ ವಿರುದ್ಧ ಎಫೈಆರ್

ಪಶ್ಚಿಮ ಬಂಗಾಲ ಸರ್ಕಾರ ವಿರುದ್ಧ ತೀರಾ ಕೆಟ್ಟ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ವಿರುದ್ಧ ಎಫೈಆರ್ ದಾಖಲಾಗಿದೆ. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿರುದ್ಧ ಪೊಲೀಸ್ ತನಿಖೆ ಆರಂಭಗೊಂಡಿದೆ.

ಬರಕಪೋರೆ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ನಿಮ್ತಾ ಪೊಲೀಸ್ ಠಾಣೆಯಲ್ಲಿ ರೂಪಾ ವಿರುದ್ಧ ನಿನ್ನೆ ಎಫೈಆರ್ ದಾಖಲಿಸಲಾಗಿದೆ. ಪಶ್ಚಿಮ ಬಂಗಾಲದಲ್ಲಿ ಪತ್ನಿಯರು ಮತ್ತು ಹೆಣ್ಮಕ್ಕಳು ಅತ್ಯಾಚಾರಗೊಳ್ಳದೆ 15 ದಿನ ಬಚಾವಾಗಲು ಸಾಧ್ಯವಿಲ್ಲ ಎಂದು ರೂಪಾ ಹೇಳಿಕೆ ನೀಡಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.