ಸಂವಿಧಾನಕ್ಕೆ ಮಾನ್ಯತೆ ನೀಡಿ ಮತ ಸೌಹಾರ್ದತೆ ಕಾಪಾಡುವಲ್ಲಿ ಯುವ ಜನರ ಪಾತ್ರ ಮಹತ್ತರ : ಇಪಿಜೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಾಷ್ಟ್ರದ ಸಂವಿಧಾನಕ್ಕೆ ಮಾನ್ಯತೆ ನೀಡಿ ಮತಸೌ ಹಾರ್ದತೆಯನ್ನು ಕಾಪಾಡುವಲ್ಲಿ ಯುವಜನರ ಪಾತ್ರ ಮಹತ್ತರವಾದುದು. ಸಿಪಿಎಂ ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಎಂದು ಪಕ್ಷದ ಕೇಂದ್ರ ಸಮಿತಿಯ ಸದಸ್ಯ ಇ ಪಿ ಜಯರಾಜನ್ ಕರೆ ನೀಡಿದರು.

ಸಿಪಿಎಂ ಪಕ್ಷದ ಸಕ್ರಿಯ ಮುಖಂಡರಾಗಿ, ಗ್ರಾ ಪಂ ಸದಸ್ಯರಾಗಿ, ಸರ್ವಪಕ್ಷಗಳೊಂದಿಗೆ ಉತ್ತಮ ಭಾಂದವ್ಯದಿಂದಿದ್ದು, ಅಕಾಲಿಕವಾಗಿ ಮೃತರಾದ ಸುಬ್ಬಯ್ಯಕಟ್ಟೆಯ ಬಿ ಎ ಮೊಹಮ್ಮದ್ ಸ್ಮರಣಾರ್ಥ ಪಕ್ಷದ ಕಾರ್ಯಕರ್ತರ ಮತ್ತು ನಾಗರಿಕರ ಸಹಕಾರದೊಂದಿಗೆ ಸುಬ್ಬಯ್ಯಕಟ್ಟೆಯಲ್ಲಿ ನಿರ್ಮಿಸಿದ ಮೊಹಮ್ಮದ್ ಸ್ಮಾರಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾರ್ಕಿಸ್ಟ್ ಪಕ್ಷ ಜನಸಾಮಾನ್ಯರ, ರೈತರ ಧ್ವನಿಯಾಗಿ ಸಾಧಿಸಿರುವ ಸಾಧನೆಗಳು ಮಹತ್ತರವಾಗಿದ್ದು, ಪಕ್ಷದ ಕಾರ್ಯಕರ್ತರ ಶ್ರಮ ಅಪಾರವಾದುದು. ಏಕತೆ, ಸಾಮಾಜಿಕ ಪಿಡುಗುಗಳು, ಜನಸಾಮಾನ್ಯರ ಮೂಲಭೂತ ಹಕ್ಕುಗಳ ರಕ್ಷಣೆಗಳಿಗೆ ಪಕ್ಷ ಎಂದಿಗೂ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೊಹಮ್ಮದರಂತಹ ನಿಷ್ಠಾವಂತ ಜನಸ್ನೇಹಿ ಕಾರ್ಯಕರ್ತರ ಕೊಡುಗೆ ಇತರರಿಗೆ ಎಂದಿಗೂ ಮಾರ್ಗದರ್ಶಿ ಎಂದು ಅವರು ಈ ಸಂದರ್ಭ ತಿಳಿಸಿದರು.