ಭಾರತ ಬಿಟ್ಟುಹೋಗಲಾರೆ ಎಂದ ರೋಹಿಂಗ್ಯಾ ಮೊಹಮ್ಮದ್ ಅಲಿ

ಮ್ಯಾನ್ಮಾರಿನ ರಖೈನ್ ಪ್ರಾಂತ್ಯದ ಬುತಿದಾಂಗ್ ಗ್ರಾಮದಿಂದ ಭಾರತಕ್ಕೆ ವಲಸೆ ಬಂದಿರುವ 31 ವರ್ಷದ ಮೊಹಮ್ಮದ್ ಅಲಿ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ದಕ್ಷಿಣ ದೆಹಲಿಯ ಶ್ರಮವಿಹಾರ್ ಬಳಿ ಇರುವ ಗುಡಿಸಿಲಿನಲ್ಲಿ 2012ರಿಂದಲೂ ಜೀವನ ಸವೆಸುತ್ತಿದ್ದಾನೆ.

ಹತ್ತನೆ ತರಗತಿಯವರೆಗೆ ವಿಧ್ಯಾಭ್ಯಾಸ ಮಾಡಿರುವ ಅಲಿ ತನ್ನ ಸ್ವಂತ ಊರಿನಲ್ಲಿದ್ದಾಗ ಆರನೆಯ ತರಗತಿಯ ಕೆಲವು ಮಕ್ಕಳಿಗೆ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದ. ಆದರೆ 2012ರಲ್ಲಿ ಗಲಭೆಗಳು ಆರಂಭವಾದ ನಂತರ ಅಲಿ ವಾಸಿಸುತ್ತಿದ್ದ ಗ್ರಾಮದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಮುಂಜಾನೆ ಆರರಿಂದ ಸಂಜೆ ಆರರವರೆಗೆ ಕಫ್ರ್ಯೂ ಹೇರಲಾಗುತ್ತಿತ್ತು.

ಮನೆಯಿಂದ ಹೊರಗೆ ಬಂದವರನ್ನು ಗುಂಡಿಟ್ಟು ಕೊಲ್ಲಲಾಗುತ್ತಿತ್ತು. ಸೇನೆ ಗ್ರಾಮದೊಳಗೆ ನುಗ್ಗಿ ಮುಸ್ಲಿಮರ ಹತ್ಯೆ ಮಾಡಲು ಆರಂಭಿಸಿತ್ತು. ಯುವ ಮುಸ್ಲಿಮರನ್ನು ಕೊಲ್ಲುವ ಮೂಲಕ ಮುಸ್ಲಿಂ ಸಂತತಿಯನ್ನೇ ಕೊನೆಗೊಳಿಸುವ ಹುನ್ನಾರ ನಡೆದಿತ್ತು ಎನ್ನುತ್ತಾರೆ ಮೊಹಮ್ಮದ್ ಅಲಿ.

ಪ್ರತಿನಿತ್ಯ ರೋಹಿಂಗ್ಯಾ ಜನಗಳ ಮನೆಯೊಳಗೆ ನುಗ್ಗಿ ಯುವಕರನ್ನು ಬಂಧಿಸುವುದು, ಕೊಲ್ಲುವುದು ನಿತ್ಯ ಕಾಣುತ್ತಿದ್ದ ಪರಿಸ್ಥಿತಿ ಎಂದು ವಿಷಾದದಿಂದ ಹೇಳುವ ಅಲಿ ತನ್ನ ಹಲವು ಗೆಳೆಯರು ಸೇನಾ ಕ್ಯಾಂಪಿಗೆ ಹೋದವರು ಮರಳಿ ಬರಲೇ ಇಲ್ಲ ಎಂದು ಆರೋಪಿಸುತ್ತಾರೆ.

ತಮ್ಮ ಕುಟುಂಬದಲ್ಲಿ ಕಿರಿಯರಾಗಿದ್ದ ಅಲಿ ಒಮ್ಮೆ ಸೇನೆಯಿಂದ ಕ್ಯಾಂಪಿಗೆ ಬರಲು ಸಂದೇಶ ಬಂದ ಕೂಡಲೇ ತಪ್ಪಿಸಿಕೊಂಡು ಭಾರತಕ್ಕೆ ವಲಸೆ ಬಂದಿದ್ದಾರೆ.

ಕೆಲ ಕಾಲ ಬಾಂಗ್ಲಾದೇಶದಲ್ಲಿದ್ದು ನಂತರ ಭಾರತಕ್ಕೆ ಬಂದ ಮೊಹಮ್ಮದ್ ಅಲಿ ಮೇಸ್ತ್ರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ತಾವು ಭಾರತವನ್ನು ತೊರೆದು ಹೋಗುವುದಿಲ್ಲ ಎಂದು ಅಲಿ ದೃಢ ನಿಶ್ಚಯದಿಂದ ಹೇಳುತ್ತಾರೆ.