ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ರೋಜರ್ ಫೆಡರರ್

  • ಜಗದೀಶಚಂದ್ರ ಸೂಟರಪೇಟೆ

ಜಾಗತಿಕ ಟೆನಿಸ್ ರಂಗದ ಸೂಪರ್ ಸ್ಟಾರ್ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದು ವಿಶ್ವದಾಖಲೆಗೆ ಭಾಜನರಾದರು. ಭಾನುವಾರ ಆಲ್ ಇಂಗ್ಲೆಂಡ್ ಕ್ಲಬ್ ಹಸಿರು ಅಂಕಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಅವರು ಕ್ರೋವೇಶಿಯಾದ ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ಅಂತರದಲ್ಲಿ ಜಯ ಗಳಿಸಿ ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸದಿಂದಲೇ ಈ ಬಾರಿ ಕಣಕ್ಕಿಳಿದಿರುವ ರೋಜರ್ ಫೆಡರರ್ ತಮ್ಮ ಅಮೋಘ ಆಟದಿಂದ ಈ ಬಾರಿ ಮಿಂಚಿದರು. 2012ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಇವರು ಐದು ವರ್ಷಗಳ ಅಂತರದ ಬಳಿಕ ಈ ಪ್ರಶಸ್ತಿಗೆ ಮುತ್ತಿಕ್ಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 2014ರ ಅಮೆರಿಕಾ ಓಪನ್ ಟೆನಿಸ್ ಸೆಮಿಫೈನಲ್ ಪಂದ್ಯದಲ್ಲಿ ಮರಿನ್ ಸಿಲಿಕ್ ಅವರು ಫೆಡರರ್ ಅವರನ್ನು ಸೋಲಿಸಿದ್ದರು. ಇದೀಗ ಈ ಸೋಲಿಗೆ ಪ್ರತಿಯಾಗಿ ಫೆಡರರ್ ಈಗ ವಿಂಬಲ್ಡನಿನಲ್ಲಿ ಮರಿನ್ ಸಿಲಿಕ್ ಅವರನ್ನು ಸೋಲಿಸಿ ಮುಯ್ಯಿ ತೀರಿಸಿಕೊಂಡಿದ್ದಾರೆ.

2016ರ ವಿಂಬಲ್ಡನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫೆಡರರ್ ಅವರು ಯುವ ಆಟಗಾರ ಮೈಲೊಸ್ ರಾವೊನಿಕ್ ವಿರುದ್ಧ ಸೋತಿದ್ದರು. ಈ ಸೋಲಿನ ಬಳಿಕ ಫೆಡರರ್ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದ್ದವು. ಫೆಡರರ್ ನಿವೃತ್ತಿ ಹೊಂದುವುದೇ ಸೂಕ್ತ ಎಂಬ ಮಾತುಗಳು ಟೆನಿಸ್ ವಲಯದಿಂದ ವ್ಯಕ್ತವಾಗಿತ್ತು.

ಆದರೆ, ತನ್ನ ಫಾರ್ಮ್ ಬಗ್ಗೆ ಟೀಕಿಸುತ್ತಿದ್ದ ಟೀಕಾಕಾರರಿಗೆ ಫೆಡರರ್ ಈ ಬಾರಿಯ ವಿಂಬಲ್ಡನ್ ಟೂರ್ನಿಯಲ್ಲಿ ದಿಟ್ಟ ಉತ್ತರ ಕೊಟ್ಟಿದ್ದಾರೆ. ಸುಮಾರು ಎರಡು ದಶಕಗಳಿಂದ ವೃತ್ತಿಪರ ಟೆನಿಸ್ ಆಡುತ್ತಿರುವ ಇವರು ತಮ್ಮ ಫಿಟ್ನೆಸ್ ಕಾಪಾಡಿಕೊಂಡು ಜಾಗತಿಕ ಟೆನಿಸ್ ರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಅನುಭವ, ಆತ್ಮವಿಶ್ವಾಸ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಹೊಂದಿರುವ ಫೆಡರರ್ ಎದುರಾಳಿಗಳಿಗೆ ಕಠಿಣ ಸವಾಲೊಡ್ಡುವ ಛಲಗಾರ.

35ರ ಹರೆಯದ ರೋಜರ್ ಫೆಡರರ್ ಆಟವನ್ನು ಗಮನಿಸಿದಾಗ ಇವರಲ್ಲಿ ಇನ್ನೂ ಟೆನಿಸ್ ಆಟದ ಕಸು ಮಾಸಿಲ್ಲ ಎನ್ನಬಹುದು. ಇದಕ್ಕೆ ಈ ಬಾರಿಯ ವಿಂಬಲ್ಡನ್ ಟೂರ್ನಿಯೇ ಸಾಕ್ಷಿ. ಈ ಸಲ ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮರಿನ್ ಸಿಲಿಕ್ ವಿರುದ್ಧ ಫೆಡರರ್ ಆಟ ಅದ್ಭುತವಾಗಿತ್ತು. ಟೆನಿಸ್ ಅಭಿಮಾನಿಗಳ ನಿರೀಕ್ಷೆಯಂತೆ ಈ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಫೆಡರರ್ ದಾಖಲೆಯೊಂದನ್ನು ನಿರ್ಮಿಸಿದರು. ಈ ಮೂಲಕ ವಿಂಬಲ್ಡನ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಗೂ ಇವರು ಪಾತ್ರರಾದರು. ಈ ಹಿಂದೆ 1975ರಲ್ಲಿ ಅಮೆರಿಕದ ಅರ್ಥರ್ ಆಶ್ ತಮ್ಮ 32ನೇ ವಯಸ್ಸಿನಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ದಾಖಲೆಗೈದಿದ್ದರು.

ಅಂತೂ ಸ್ಪರ್ಧಾತ್ಮಕ ಟೆನಿಸ್ಸಿನಲ್ಲಿ ರೋಜರ್ ಫೆಡರರ್ ಅವರ ಉನ್ನತ ಮಟ್ಟದ ಆಟ ಯುವ ಆಟಗಾರರಿಗೆ ಸ್ಪೂರ್ತಿಯಾಗಲಿದೆ. ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಫೆಡರರ್ ಒಟ್ಟು 19 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಒಡೆಯ.