ಯಕ್ಷಗಾನದಲ್ಲಿ ಸಿಂಹದ ಘರ್ಜನೆಗೆ ಹೆದರಿ ಆಸ್ಪತ್ರೆಗೆ ದಾಖಲಾದ ಪ್ರೇಕ್ಷಕ

ಘರ್ಜಿಸಿದ ಸಿಂಹ ವೇಷಧಾರಿ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಯಕ್ಷಗಾನದಲ್ಲಿ ಸಿಂಹ ವೇಷಧಾರಿ ನಿದ್ದೆಯ ಮಂಪರಿನಲ್ಲಿದ್ದ ಪ್ರೇಕ್ಷಕನ ಮುಂದೆ ನಿಂತು ಘರ್ಜಿಸಿದರಿಂದ ಹೆದರಿ ನೆಲಕ್ಕೆ ಬಿದ್ದ ಪ್ರೇಕ್ಷಕ ಆಸ್ಪತ್ರೆಗೆ ಸೇರಿದ ಘಟನೆ ಮಾರೂರಿನಿಂದ ತಡವಾಗಿ ಬೆಳಕಿಗೆ ಬಂದಿದೆ.

ಮಾರೂರಿನಲ್ಲಿ ಈಚೆಗೆ ಶನೀಶ್ವರ ಪೂಜೆ ಪ್ರಯುಕ್ತ ರಾತ್ರಿ ಎಡನೀರು ಮೇಳದವರಿಂದ ಜಾಂಬವತೀ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆದಿತ್ತು. ಬೆಳಗಿನ ಜಾವ 4ಕ್ಕೆ ಪ್ರಸೇನನ ಪ್ರವೇಶ. ದೂತ ಇಲ್ಲ, ಬೇಟೆಯ ಸನ್ನಿವೇಶ. ಚೌಕಿಯ ಒಂದು ಬದಿಯಿಂದ ಸಿಂಹ ಘರ್ಜನೆ ಮಾಡುತ್ತಾ ಪ್ರೇಕ್ಷಕರ ಮಧ್ಯದಿಂದ ರಾಳದೊಂದಿಗೆ ಪ್ರವೇಶವಾಯಿತು. ಘರ್ಜಿಸುತ್ತಾ ನಿದ್ದೆಯಲ್ಲಿದ್ದ ಎಲ್ಲರನ್ನು ಎಬ್ಬಿಸುತ್ತಾ ಮುಂದೆ ಸಾಗುವ ಸನ್ನಿವೇಶ. ಅದೇ ಹೊತ್ತಿಗೆ ಪ್ರಸೇನನು ರಂಗಸ್ಥಳದಿಂದ ಕೆಳಗಿಳಿದು ಸಿಂಹದೊಂದಿಗೆ ಕಾದಾಡುವ ದೃಶ್ಯ ನಡೆಯಿತು. ಇದಾದ ನಂತರ ಸಭೆಯ ಮೊದಲ ಸಾಲಿನಲ್ಲಿ ಜೋರು ನಿದ್ರೆಗೆ ಜಾರಿದ ಪ್ರೇಕ್ಷಕನ ಎದುರು ಮಂಡಿಯೂರಿ ಸಿಂಹ ಜೋರಾಗಿ ಆರ್ಭಟಿಸುತ್ತಾ ಅವರನ್ನು ಎಬ್ಬಿಸಿ ರಾಳ ಬಿಸಾಕಿ ರಂಗಸ್ಥಳ ಏರಿತು.

ಸಿಂಹದ ಘರ್ಜನೆಗೆ ಹೆದರಿ ಒಮ್ಮೆಲೆ ನಿದ್ದೆಯಿಂದ ಎದ್ದ ಪ್ರೇಕ್ಷಕ ಅಲ್ಲಿಂದ ನೆಲಕ್ಕೆ ಬಿದ್ದು, ಕೈಕಾಲು ಬಡಿಯಲಾರಂಭಿಸಿದ. ಇದನ್ನು ಕಂಡು ಸ್ಥಳದಲ್ಲಿ ಸಂಘಟಕರು ಲೋ ಬಿಪಿಯಾಗಿರಬಹುದು, ಇಲ್ಲವೆ ಹೃದಯಾಘಾತವಾಗಿರಬಹುದೆಂದು ಹೆದರಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಇದನ್ನು ಕಂಡು ಸಿಂಹದೊಳಗಿದ್ದ ಕಲಾವಿದನ ಹೃದಯ ಕೂಡ ಮರುಗಲಾರಂಭಿಸಿತು. ಮೂರು ದಿನ ಚಿಕಿತ್ಸೆ ಪಡೆದು ಪ್ರೇಕ್ಷಕ ಗುಣಮುಖವಾಗಿ ಮನೆಗೆ ಬಂದರು. ಯಕ್ಷಗಾನದಲ್ಲಿ ನಡೆದ ಈ ನೈಜ ಸನ್ನಿವೇಶ ವಾಟ್ಸಪ್ಪಿನಲ್ಲಿ ವೈರಲಾಗಿದೆ.