ಚರಂಡಿ ಇಲ್ಲದೆ ಮುಗಿಸಿದರು ರಸ್ತೆ ಕಾಮಗಾರಿ

 ಕೊರಗರ ಕಷ್ಟ ಕೇಳೋರಿಲ್ಲ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೂಡುಬಿದಿರೆ ಕ್ಷೇತ್ರದ ಎದುರುಪದವಿನ ಕೊರಗ ಕಾಲೊನಿಗಳಿಗೆ ಶಾಸಕ ಅಭಯಚಂದ್ರ ಜೈನ್ ಅವರ ನಿಧಿಯಿಂದ ಸರಿಸುಮಾರು 61 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆ ಕಾಮಗಾರಿ ಮತ್ತು ನೀರಿನ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ.

ಈ ಯೋಜನೆಯಂತೆ ಕಾಲೊನಿಗೆ ಸಮರ್ಪಕವಾದ ಕಾಂಕ್ರೀಟ್ ರಸ್ತೆಯನ್ನು ಗುತ್ತಿಗೆದಾರರು ಒದಗಿಸಿದ್ದಾರೆ. ಆದರೆ ಮಳೆಗಾಲದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡದ ಕಾರಣ ಸ್ಥಳೀಯರು ಕಷ್ಟಕ್ಕೀಡಾಗಿದ್ದಾರೆ. ಕಾಂಕ್ರೀಟ್ ರಸ್ತೆಯಿಂದ ಇಳಿದು ಕಾಲುದಾರಿಯಲ್ಲಿ ಸಾಗುವ ಜನರ ಪಾಡು ನರಕಯಾತನೆಯಾಗಿದೆ.

ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸದೇ ಗುತ್ತಿಗೆದಾರರು ತಮ್ಮ ಕೆಲಸ ಪೂರ್ತಿಗೊಳಿಸಿ ಸುಮ್ಮನಾಗಿದ್ದಾರೆ. ಹೀಗಾಗಿ ನೀರು ರಸ್ತೆಯ ಎರಡು ಬದಿಗಳಲ್ಲಿ ನಿಂತಿದೆ. ಇನ್ನು ಕೆಲವು ಕಡೆ ಕೃತಕ ನೆರೆ ಉಂಟಾಗಿ ಪಕ್ಕದ ಕೆರೆ, ಬಾವಿಗಳಿಗೆ ತ್ಯಾಜ್ಯ ನೀರು ತುಂಬಿಕೊಳ್ಳುತ್ತಿದೆ.