ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ

ಶಾಸಕ ನೆಲ್ಲಿಕುನ್ನು ಮಾತಾಡಿದರು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮೋಟಾರು ವಾಹನ ಇಲಾಖೆ ವತಿಯಿಂದ ಜಿಲ್ಲಾ ರಸ್ತೆ ಸುರಕ್ಷಾ ವಾರಾಚರಣೆಗೆ ಚಾಲನೆ ದೊರೆಯಿತು.

ಈ ತಿಂಗಳ 15ರವರೆಗೆ ನಡೆಯಲಿರುವ ಸುರಕ್ಷಾ ಸಪ್ತಾಹವನ್ನುಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ನಿಮ್ಮ ಸುರಕ್ಷೆ ಕುಟುಂಬದ ರಕ್ಷೆ ಎಂಬ ಘೋಷವಾಕ್ಯದೊಂದಿಗೆ ಆರಂಭಗೊಂಡ ಈ ಸುರಕ್ಷಾ ಸಪ್ತಾಹ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ವಾಹನ ಸಂಚಾರಗಳಲ್ಲಿ ತಮ್ಮನ್ನು ತಾವು ಜಾಗರೂಕರನ್ನಾಗಿ ಮಾಡಿಕೊಂಡರೆ ಸಂಭವಿಸಬಹುದಾದಂತಹ ದುರಂತಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಬಹುದಾಗಿದೆ” ಎಂದು ಹೇಳಿದರು.

ರಸ್ತೆ ಸಂಚಾರದಲ್ಲಿ ಸವಾರರು ಜಾಗೃತೆ ವಹಿಸಬೇಕು ಎನ್ನುವ ವಿಷಯದ ಬಗ್ಗೆ ಆರ್ ಟಿ ಒ ಮಾತನಾಡಿದರು. ಮೋಟಾರು ವಾಹನ ತಪಾಸಣಾಧಿಕಾರಿ ರಸ್ತೆ ಸುರಕ್ಷಾ ಜಾಗೃತಿ ಬಗ್ಗೆ ತರಗತಿ ನಡೆಸಿದರು. ಹಲವಾರು ಮಂದಿ ಪಾಲ್ಗೊಂಡರು.