ರಿಸರ್ವೇಶನ್ ಬೋಗಿಯಲ್ಲಿ 90 ನಿಮಿಷ ಟಾಯ್ಲೆಟ್ ಬಳಸಲಾಗದ ಕುಟುಂಬಕ್ಕೆ ರೂ 30,000 ದಂಡ ನೀಡಲು ಆದೇಶ

ನವದೆಹಲಿ : ರೈಲಿನ ಸೀಟುಗಳ ಅಕ್ಕಪಕ್ಕದಲ್ಲಿ ಹಾಗೂ ಶೌಚಾಲಯಕ್ಕೆ ಹೋಗುವ ದಾರಿಯನ್ನು ಆಕ್ರಮಿಸಿ ಹಲವಾರು ಮಂದಿ ಪ್ರಯಾಣಿಸುತ್ತಿದ್ದುದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಶೌಚಾಲಯವನ್ನು ಉಪಯೋಗಿಸಲು ಅಸಾಧ್ಯವಾಗಿ ಸಂಕಷ್ಟ ಅನುಭವಿಸಿದ್ದ ಕುಟುಂಬವೊಂದಕ್ಕೆ ಭಾರತೀಯ ರೈಲ್ವೆ ರೂ 30,000 ಪರಿಹಾರ ನೀಡಬೇಕಾಗಿ ಬಂದಿದೆ. 2009ರಲ್ಲಿ ಅಮೃತಸರದಿಂದ ದೆಹಲಿಗೆ ಪ್ರಯಾಣಿಸುವ ಸಂದರ್ಭ ನಡೆದ ಈ ಘಟನೆಯ ನಂತರ  ಕಾನೂನು ಮತ್ತು ನ್ಯಾಯ ಇಲಾಖೆಯ  ಕಾನೂನು ಉಪ ಸಲಹೆಗಾರರಾಗಿರುವ ದೇವಕಾಂತ್ ಅವರು ತಾವು ತಮ್ಮ ಪತ್ನಿ ಹಾಗೂ ಇಬ್ಬರು ವiಕ್ಕಳೊಂದಿಗೆ ಅನುಭವಿಸಿದ ಯಾತನೆಯನ್ನು ಇನ್ನೊಬ್ಬರು ಅನುಭವಿಸಬಾರದೆಂಬ ಉದ್ದೇಶದಿಂದ ರೈಲ್ವೆ ಇಲಾಖೆಯ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಏಳು ವರ್ಷಗಳ ಕಾನೂನು ಹೋರಾಟದ ಬಳಿಕ ಇದೀಗ ರಾಜ್ಯ ಗ್ರಾಹಕ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದು ದೇವಕಾಂತ್ ಅವರಿಗೆ ರೂ 30,000 ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಘಟನೆ ನಡೆದಾಗ ದೇವಕಾಂತ್ ಅವರ ಕುಟುಂಬ ಟಿಟಿಇಯನ್ನು ಸಂಪರ್ಕಿಸಿ ರೈಲ್ವೇ ಪೊಲೀಸರಿಗೆ ಚಿತಿಳಿಸುವಂತೆ ಹೇಳಿದರೂ ಅವರು ಕೈಚೆಲ್ಲಿದ್ದರು. ಆದರೆ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಉತ್ತರ ರೈಲ್ವೆಯ ವಕೀಲರು  ಶೌಚಾಲಯದ ಹಾದಿಯಲ್ಲಿ ಕುಳಿತಿದ್ದ ಗುಂಪನ್ನು ಮುಂದಿನ ಅಂಬಾಲ ನಿಲ್ದಾಣದಲ್ಲಿ ಕೆಳಗಿಳಿಯುವಂತ ಹೇಳಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದರಲ್ಲದೆ ದೂರುದಾರರು ರೈಲ್ವೆಯಿಂದ ಪರಿಹಾರ ಪಡೆಯುವ ಸಲುವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದೂ ವಾದಿಸಿದ್ದರು.ಆದರೆ ಇದನ್ನು ನಿರಾಕರಿಸಿದ ನ್ಯಾಯಾಲಯ ರಿಸರ್ವೇಶನ್ ಬೋಗಿಯಲ್ಲಿ ಕೇವಲ ಟಿಕೆಟ್ ಮುಂಗಡ ಕಾದಿರಿಸಿದವರು ಮಾತ್ರ ಪ್ರಯಾಣಿಸುವಂತೆನೋಡಿಕೊಳ್ಳುವುದು ರೈಲ್ವೆಯ ಕರ್ತವ್ಯವಾಗಿರುವಾಗ ಹೀಗೆ ಗುಂಪು ಗುಂಪಾಗಿ ಹಾದಿಯಲ್ಲಿ ಕುಳಿತು ಪ್ರಯಾಣಿಸುವವರನ್ನು ರೈಲ್ವೆ ಇಲಾಖೆ ನಿಯಂತ್ರಿಸಲು ವಿಫಲವಾಗಿರುವುದು ಕರ್ತವ್ಯಲೋಪಕ್ಕೆ ಸಮ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.