ರೈಲ್ವೇ ಕ್ವಾಟ್ರಸ್ ನಿವಾಸಿಗಳ ಗೋಳು; ಕಳ್ಳರ ಭೀತಿಯಲ್ಲಿ ಸಾಗಿದ ಜೀವನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಸಮೀಪದಲ್ಲಿ ವಾಸವಾಗಿರುವ ಸುಮಾರು 300ಕ್ಕೂ ಅಧಿಕ ಕುಟುಂಬಗಳು ಕಳ್ಳತನದ ಭಯದಲ್ಲಿ ಜೀವನ ನಡೆಸುತ್ತಿವೆ. ಹೌದು, ಇಲ್ಲಿ ಪ್ರತಿದಿನ ದರೋಡೆ ನಡೆಯುತ್ತಿದ್ದು, ದುಷ್ಕರ್ಮಿಗಳ ಅಟ್ಟಹಾಸದ ನಡುವೆ ಜನರು ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಕಾಲೊನಿಯಲ್ಲಿ ಕಳ್ಳತನವಾದ ಮೇಲೆ ನಿವಾಸಿಗಳೆಲ್ಲ ಒಟ್ಟಾಗಿ ರೈಲ್ವೇ ಅಧಿಕಾರಿಗಳ ಮುಂದೆ ಜಮಾಯಿಸಿ ಭದ್ರತೆಗಾಗಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಈ ಕ್ವಾಟ್ರಸ್ಸಿನ ರೈಲ್ವೇ  ಉದ್ಯೋಗಿಯ ಪತ್ನಿಯ ಮೇಲೆ ಹಾಡಹಗಲೇ ದರೋಡೆಕೋರನೊಬ್ಬ ದೌರ್ಜನ್ಯವೆಸಗಿ ಆಭರಣ ದೋಚಲು ಯತ್ನಿಸಿದ್ದು, ಆ ಬಳಿಕ ನಿವಾಸಿಗಳ ಆತಂಕ ಇಮ್ಮಡಿಸಿದೆ. ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

`ಕಾಲೊನಿಯಲ್ಲಿ ಮನೆಗಳಿವೆ, ಅಪಾರ್ಟಮೆಂಟುಗಳಿವೆ. ಆದರೆ ಕಂಪೌಂಡು ಗೋಡೆಯೇ ಇಲ್ಲ. ಕಾಲೊನಿ ರೈಲ್ವೇ ಸ್ಟೇಷನ್ನಿಗೆ ಹೊಂದಿಕೊಂಡು ಇದೆ. ಈ ಕಾಲೊನಿ ಒಳಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಕಾಲೊನಿ ಒಳಗೆ ಅದೆಷ್ಟೋ ಅಪರಿಚಿತರು, ಕುಡುಕರು ಅತ್ತಿತ್ತ ಸುಳಿದಾಡುತ್ತಾ ಇರುತ್ತಾರೆ. ಇದರಿಂದ ನಿವಾಸಿಗಳು ಭಯದ ವಾತಾವರಣದಲ್ಲೇ ದಿನಕಳೆಯುವಂತಾಗಿದೆ’ ಎಂದು ಕಾಲೋನಿ ನಿವಾಸಿ ಲೋಕೊ ಪೈಲೆಟ್ ಡಿಜಿಲ್ ಹೇಳಿದ್ದಾರೆ. `ಕಾಲೋನಿಯಲ್ಲಿ ನೆಲಮಾಳಿಗೆಯಲ್ಲಿ ಇರುವವರಿಗೆ ಅಥವಾ ಒಬ್ಬಂಟಿಗರಾಗಿರುವವರಿಗೆ ನಿಜಕ್ಕೂ ಅಪಾಯ. ಅಪರಿಚಿತರು ಬಾಗಿಲು ಬಡಿಯುತ್ತಾರೆ, ಒಂದು ವೇಳೆ ಮನೆಯವರು ಯಾರಾದರೂ ಹೊರಗೆ ಬಂದರೆ ಅವರ ಮೇಲೆರಗಿ ದರೋಡೆ ಮಾಡುತ್ತಾರೆ. ಈ ಕಾಲೊನಿಯಲ್ಲಿ ಕಡಿಮೆ ಪಕ್ಷ ತಿಂಗಳಿಗೆ ಒಂದು ದರೋಡೆ, ಕಳತನ ಪ್ರಕರಣಗಳು ನಡೆಯುತ್ತಿರುತ್ತದೆ. ಹಾಗಾಗಿ ಕಾಲೊನಿಗೆ ಭದ್ರತೆಯ ಅವಶ್ಯಕತೆ ಬಹಳಷ್ಟಿದೆ’ ಎಂದು ಇನ್ನೊಬ್ಬ ನಿವಾಸಿ, ಜ್ಯೂನಿಯರ್ ಇಂಜಿನಿಯರ್ ಡಿ ಸಿಂಗ್ ಮೀನ ಹೇಳಿದ್ದಾರೆ.