ಪ್ರಧಾನಿ ಸಮಾರಂಭದಲ್ಲಿ ಲಾಲು ಅವರನ್ನು ವೇದಿಕೆಯಲ್ಲಿ ಕುಳಿಸದೆ, ನೆಲದಲ್ಲಿ ಕುಳಿಸಿದ್ದಕ್ಕೆ ಆರ್ಜೆಡಿ ಆಕ್ಷೇಪ

ಪಾಟ್ನಾ : ನಗರದಲ್ಲಿ ಆಯೋಜಿಸಲಾಗಿದ್ದ ಗುರು ಗೋವಿಂದ್ ಸಿಂಗ್ ಜನ್ಮ ದಿನಾಚರಣೆ ಸಂದರ್ಭದ ಸಮಾರಂಭವೊಂದರಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತವರ ಇಬ್ಬರು ಪುತ್ರರು  ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಭೋಜನ ಸವಿದ ಮುರದಿನವೇ ಪಕ್ಷವು ತಕರಾರೊಂದನ್ನು ಎತ್ತಿದೆ. ಸಮಾರಂಭದ ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್  ಆಸೀನರಾಗಿದ್ದರೆ ಅವರ ಜತೆ ತಮ್ಮ ನಾಯಕ ಲಾಲು ಅವರೆನ್ನೇಕೆ ಕೂರಿಸಿಲ್ಲ ಎಂಬುದೇ ಆರ್ಜೆಡಿ ಇದೀಗ ಎತ್ತಿದ ಪ್ರಶ್ನೆಯಾಗಿದೆ.

ಬಿಹಾರದ ಮಹಾಮೈತ್ರಿಕೂಟದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಪಡೆದಿರುವ ಪಕ್ಷವಾದ ಆರ್ಜೆಡಿಯ ಮುಖ್ಯಸ್ಥ ಲಾಲು ಯಾದವ್, ಅವರ ಪುತ್ರರಾದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ  ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್  ಇತರ ಮೂರು ಕೇಂದ್ರ ಸಚಿವರೊಂದಿಗೆ  ಜತೆಯಾಗಿ ಮೊದಲ ಸಾಲಿನಲ್ಲಿ ನೆಲದಲ್ಲಿ ಆಸೀನರಾಗಿದ್ದರು.

“ಲಾಲು ಯಾದವ್ ಅವರನ್ನು ನೆಲದಲ್ಲಿ ಏಕೆ ಕೂರಿಸಲಾಯಿತು ? ಬಿಹಾರದಲ್ಲಿರುವುದು ಮಹಾಮೈತ್ರಿ ಸರಕಾರ. ಹಾಗಿರುವಾಗ ಎಲ್ಲರನ್ನೂ ವೇದಿಕೆಯಲ್ಲಿ ಕೂರಿಸಬೇಕಲ್ಲವೇ?” ಎಂದು  ಹಿರಿಯ ಆರ್ಜೆಡಿ ನಾಯಕ ರಘುವಂಶ್ ಪ್ರಸಾದ್ ಸಿಂಗ್ ಪ್ರಶ್ನಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಮಾತ್ರ ಈ ವಿಚಾರದಲ್ಲಿ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.