ಬಂಗ್ರಕೂಳೂರಲ್ಲಿ ಫಲ್ಗುಣಿ ಉಪನದಿ, ರಾಜಕಾಲುವೆ ಒತ್ತುವರಿ

ಮಣ್ಣುಹಾಕಿ ಒತ್ತುವರಿ ಮಾಡಲಾಗಿರುವ ಮೈದಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭೂಮಿಯ ದರ ಗಗನಕ್ಕೇರಿದ ಬಳಿಕ ನಗರದಲ್ಲಿ ವಸತಿ ಸಮುಚ್ಛಯಗಳು, ಶಾಪಿಂಗ್ ಕಾಂಪ್ಲೆಕ್ಸುಗಳು ಇನ್ನಿಲ್ಲದಂತೆ ಹುಟ್ಟಿಕೊಂಡವು. ಅದರಲ್ಲೂ ನೀರು ಹರಿದುಹೋಗಲು ಇದ್ದ ಕಾಲುವೆ, ತೋಡು, ಕೆರೆಗಳೆಲ್ಲವನ್ನೂ ಮಣ್ಣು ಹಾಕಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಯಿತು. ಇದೀಗ ನಗರದಲ್ಲಿ ಎಲ್ಲೆಂದರಲ್ಲಿ ಗಗನಚುಂಬಿ ಕಟ್ಟಡಗಳೇ ಕಂಡು ಬರುತ್ತಿವೆ. ಅಲ್ಲೊಂದು ಇಲ್ಲೊಂದು ಕಡೆ ಇದ್ದ ಗದ್ದೆಗಳು ಕೂಡಾ ಮಾಯವಾಗಿ ಬಿಟ್ಟಿವೆ.

ಇದೀಗ ಉದ್ಯಮಿಯೊಬ್ಬರು ತನ್ನ ಪುತ್ರಿಯ ವಿವಾಹಕ್ಕೆ ಬಂಗ್ರ ಕೂಳೂರಿನಲ್ಲಿರುವ ಫಲ್ಗುಣಿ ಉಪನದಿಯನ್ನೇ ಮಣ್ಣುಹಾಕಿ ಒತ್ತುವರಿ ಮಾಡಿಕೊಂಡಿರುವ ಆರೋಪ ವ್ಯಕ್ತವಾಗಿದೆ. ಮಳೆನೀರು ಹರಿದು ಹೋಗಲು ಇದ್ದ ತೋಡನ್ನು ಕೂಡಾ ಮಣ್ಣು ಹಾಕಿ ಮುಚ್ಚಿ ಮದುವೆ ಚಪ್ಪರ ಹಾಕಲು ಸಮತಟ್ಟು ಮಾಡಲಾಗುತ್ತಿದೆ. ಇದರ ಜೊತೆ ರಾಜಕಾಲುವೆಗೂ ಮಣ್ಣು ಹಾಕಲಾಗಿದೆ. ಜನರು ದೂರು ನೀಡಿದ್ದರೂ ಆಡಳಿತ ಕೈಕಟ್ಟಿ ಕೂತಿದೆ. ಮೊದಲೇ ತಗ್ಗು ಪ್ರದೇಶವಾಗಿರುವ ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೃತಕ ನೆರೆ ನೀರು ಆವೃತ್ತವಾಗುತ್ತದೆ. ಇದೀಗ ಇಲ್ಲಿ ಮಣ್ಣುಹಾಕಿ ತೋಡನ್ನು ಕೂಡಾ ಮುಚ್ಚಿ ಹಾಕುವುದರಿಂದ ಮುಂದಿನ ಮಳೆಗಾಲದಲ್ಲಿ ಸ್ಥಳೀಯ ಜನತೆ ಇನ್ನಷ್ಟು ಕಷ್ಟ ಅನುಭವಿಸುವುದರಲ್ಲಿ ಅನುಮಾನವಿಲ್ಲ ಎಂದು ಸ್ಥಳೀಯ ಪ್ರಜ್ಞಾವಂತರು ಹೇಳುತ್ತಿದ್ದಾರೆ.

ಮಂಗಳೂರಿನ ಅತಿ ಹೆಚ್ಚು ಮುಳುಗಡೆ ಪ್ರದೇಶ ಎಂದರೆ ಬಂಗ್ರ ಕೂಳೂರು ಸುತ್ತಮುತ್ತಲಿನ ಪ್ರದೇಶ. ಪ್ರವಾಹದ ನೀರು ಹರಿಯಲು ಇದ್ದ ರಾಜಕಾಲುವೆಯನ್ನು ಒಂದು ಕಡೆಯಿಂದ ಮುಚ್ಚಿ ಹಾಕಿದ್ದರೆ, ಇನ್ನೊಂದು ಕಡೆ ಫಲ್ಗುಣಿಯ ಉಪನದಿಗೆ ಮಣ್ಣು ತುಂಬಲಾಗಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ವರ್ಷದ ಐದಾರು ತಿಂಗಳು ಪ್ರವಾಹದ ನೀರಿಗೆ ಮನೆಗಳು ಮುಳುಗಡೆಯಾಗಬಹುದು ಎಂಬ ಭೀತಿ ಸೃಷ್ಟಿಯಾಗಿದೆ. ಕೂಳೂರು, ರಾಯಿಕಟ್ಟೆ ಪ್ರದೇಶ ಬಹುತೇಕ ಮಳೆನೀರು ಹರಿದು ಹೋಗುವ ತೋಡು ಪ್ರದೇಶಗಳಾಗಿದೆ. ಅಲ್ಲದೆ ಕಾವೂರಿನಿಂದ ಮಲ್ಲಕಾಡು ಪ್ರದೇಶದಲ್ಲೂ ತಗ್ಗು ಪ್ರದೇಶದಲ್ಲಿ ನೀರಿನ ಒತ್ತಡ ಹೆಚ್ಚಾಗುತ್ತದೆ. ನೈಸರ್ಗಿಕವಾಗಿ ಮಳೆನೀರು ಹರಿದು ಹೋಗುವ ತೋಡುಗಳನ್ನು ಮಣ್ಣುಹಾಕಿ ಮುಚ್ಚುವುದರಿಂದ ಅಪಾಯವೇ ಹೆಚ್ಚು. ಜಪ್ಪಿನಮೊಗರು, ಪಡೀಲು, ಕಣ್ಣೂರು ಪರಿಸರದಲ್ಲಿ ಕೂಡಾ ಇಂತಹದ್ದೇ ತಗ್ಗು ಪ್ರದೇಶಗಳಿದ್ದ ಮಳೆಗಾಲದಲ್ಲಿ ಯಾವ ಸ್ಥಿತಿ ಎದುರಾಗುತ್ತದೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.

ಸರ್ಕಾರ ಮತ್ತು ಅಧಿಕಾರಿಗಳು ಭೂ ಮಾಫಿಯಾ, ಉದ್ಯಮಿಗಳ ನಿಯಂತ್ರಣದಲ್ಲಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಇದೇ ಮೈದಾನದಲ್ಲಿ ಸಂಘಟನೆಯೊಂದರ ಸಮ್ಮೇಳನ ಹಾಗೂ ಉದ್ಯಮಿಯೊಬ್ಬರ ಪುತ್ರಿಯ ವಿವಾಹ ಸಮಾರಂಭವನ್ನು ಕೂಡ ಆಯೋಜಿಸಲಾಗಿದೆ. ಇದಕ್ಕಾಗಿ ತರಾತುರಿಯಲ್ಲಿ ಮಣ್ಣು ಹಾಕಿ ಪ್ರವಾಹದ ನೀರು ಹರಿಯುವ ಉಪ ನದಿಯನ್ನು ಮುಚ್ಚಲಾಗಿದೆ. ಜಿಲ್ಲಾಡಳಿತದಿಂದ ಯಾವುದೇ ಒಪ್ಪಿಗೆ ಪಡೆಯದೆ ರಾಜಾರೋಷವಾಗಿ ಕಾಮಗಾರಿ ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇನ್ನೊಂದೆಡೆ ಡಿ ವೈ ಎಫ್ ಐ, ಪಾಲಿಕೆ ಕಾರ್ಪೊರೇಟರ್ ದಯಾನಂದ ಶೆಟ್ಟಿ ಈ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.