ಖಾಸಗಿ ಬಸ್ ಬಂದ್ ಮಾಡಲು ಇದು ಸಕಾಲ

ಪ್ರಯಾಣಿಕರನ್ನು ಹತ್ತಿಸಲು ರಸ್ತೆಯ ಮಧ್ಯ ಭಾಗದಲ್ಲೇ ನಿಲ್ಲಿಸುವುದು, ಕರ್ಕಶ ಹಾರ್ನ್ ಬಳಕೆ, ಗಡಿಬಿಡಿಯಲ್ಲಿ ಜನರನ್ನು ಹತ್ತಿಸುವುದು, ಆಗಾಗ ಬ್ರೇಕ್ ಹಾಕುವುದು ಇತ್ಯಾದಿ ಕಾರಣಗಳಿಂದ ಮಹಿಳೆಯರಿಗೆ, ವೃದ್ಧರಿಗೆ ಬಸ್ ಸಂಚಾರ ಎಂಬುದು ಮಾರಣಾಂತಿಕವಾಗಿದೆ.

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸರಕಾರದ ಸೂಚನೆಯ ಹೊರತಾಗಿಯೂ ಕಳೆದ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆರಳೆಣಿಕೆ ಖಾಸಗಿ ಬಸ್ಸುಗಳನ್ನು ಹೊರತುಪಡಿಸಿ ಎಲ್ಲ ಖಾಸಗಿ ಸಿಸಿ, ಸರ್ವೀಸ್ ಮತ್ತು ಸಿಟಿ ಬಸ್ಸುಗಳು ಓಡಾಟ ನಡೆಸಲಿಲ್ಲ. ಇದರರ್ಥ, ದಕ್ಷಿಣ ಕನ್ನಡ ಜಿಲ್ಲೆಯನ್ನು ನಿಯಂತ್ರಿಸುವ ಸಾಮರ್ಥ್ಯ ಸಂಘಪರಿವಾರ ಸಂಘಟನೆಗಳಿಂತಲೂ ಹೆಚ್ಚಾಗಿ ಈ ಖಾಸಗಿ ಬಸ್ ಮಾಫಿಯಾಕ್ಕೆ ಇದೆ.

ಕರಾವಳಿಯ ಖಾಸಗಿ ಬಸ್ ಸೇವೆಯ ಹೆಚ್ಚುಗಾರಿಕೆಯ ಜತೆ ಜತೆಯಾಗಿ ಅಪಾರ ಲೋಪ ದೋಷಗಳನ್ನು, ಸಾಮಾಜಿಕ ಸಮಸ್ಯೆಗಳಿಗೆ ಈ ಖಾಸಗಿ ಬಸ್ ವ್ಯವಸ್ಥೆ ಕಾರಣವಾಗಿದೆ.

ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಖಾಸಗಿ ಬಸ್ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿರುವುದು ಹೌದು. ಅಂತಹ ಸೇವೆ ನೀಡಿದ ಬಸ್ ಕಂಪೆನಿಗಳು ಈಗಿಲ್ಲ. ಈಗ ಏನಿದ್ದರೂ ಬಸ್ ಮಾಲಿಕನ ಮತ್ತು ಕಂಡಕ್ಟರನ ಜೇಬು ತುಂಬಿಸುವುದು ಇವರ ಮೂಲ ಗುರಿ. ಪ್ರಯಾಣಿಕರ ಬಗ್ಗೆ ಖಾಸಗಿ ಬಸ್ಸಿನ ಸಿಬ್ಬಂದಿಗೆ ಕಿಂಚಿತ್ತೂ ಗೌರವ ಇಲ್ಲ.

ಮೊನ್ನೆ ಪರಿವಾರ ಸಂಘಟನೆಗಳು ಕರೆ ನೀಡಿದ ಬಂದ್ ನಡೆಸಲು ಖಾಸಗಿ ಬಸ್ಸುಗಳು ಕೈಜೋಡಿಸಿದವು ಎಂಬುದಕ್ಕಿಂತ ಹೆಚ್ಚಾಗಿ ಮಂಗಳೂರಿನಲ್ಲಿ ಖಾಸಗಿ ಬಸ್ ಎಂಬ ಸಾಮಾಜಿಕ ಪಿಡುಗನ್ನು ಹಂತ ಹಂತವಾಗಿ ಕೊನೆಗಾಣಿಸಲು ನೂರಾರು ಕಾರಣಗಳಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕ ಯುವತಿಯರನ್ನು ಗುರಿಯಾಗಿರಿಸಿ ನಡೆಯುತ್ತಿರುವ ಅನೈತಿಕ ಗೂಂಡಾಗಿರಿ ಹಿಂದೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಇದೇ ಖಾಸಗಿ ಬಸ್ ಸಿಬ್ಬಂದಿ ಮತ್ತು ಸಿಬ್ಬಂದಿ ಜತೆ ಅಕ್ರಮವಾಗಿ ಸೇರಿಕೊಳ್ಳುವ ಕೆಲಸ ಇಲ್ಲದ ಯುವಕರು.

ಕರಾವಳಿಯಲ್ಲಿ ಖಾಸಗಿ ಬಸ್ ಮಾಫಿಯವನ್ನು ನಿಯಂತ್ರಿಸಿದರೆ ಮಾರಲ್ ಪೆÇಲೀಸಿಂಗ್ ಪಿಡುಗು ಕೂಡ ತನ್ನಿಂದ ತಾನೇ ಕಡಿಮೆ ಆಗುತ್ತದೆ. ಮಾತ್ರವಲ್ಲದೆ, ಇಂತಹ ಗುಂಪುಗಳು ಖಾಸಗಿ ಬಸ್ ಸಿಬ್ಬಂದಿಯಿಂದ ಮಾಮೂಲಿ ಕೂಡ ವಸೂಲು ಮಾಡುತ್ತಾರೆ. ಪಂಪ್ವೆಲ್ ವೃತ್ತದಲ್ಲಿ ಇಂತಹ ಗುಂಪುಗಳು ರಾತ್ರಿ ವೇಳೆ ಸಕ್ರಿಯವಾಗಿರುತ್ತವೆ.

ಹಿಂದಿನ ಕಾಲದಿಂದಲೂ ನಗರದಲ್ಲಿ ಹೊಡೆದಾಟ ಕಾದಾಟ ಆರಂಭವಾಗಿ ಗೂಂಡಾಗಿರಿತನಕ ಬೆಳೆದವರು ಹಳೇ ಸರ್ವಿಸ್ ಬಸ್ ಸ್ಟ್ಯಾಂಡ್ ಗಿರಾಕಿಗಳೇ ಎಂಬುದು ಪೆÇಲೀಸ್ ಕಡತಗಳೇ ಹೇಳುತ್ತವೆ. ಈಗ ಇಂತಹ ಕ್ರಿಮಿನಲ್ ಕೃತ್ಯಗಳು ಟೈಮ್ ಕೀಪರ್, ಬಸ್ ಸಿಬ್ಬಂದಿ ನಡುವೆ ನಡೆಯುತ್ತಿದೆ. ಟೈಮ್ ಕೀಪರ್ ಕೂಡ ಮೊರಲ್ ಪೆÇಲೀಸಿಂಗ್ ವ್ಯವಸ್ಥೆಗೆ ಪೂರಕವಾದ ಒಂದು ಅಕ್ರಮ ವ್ಯವಸ್ಥೆಯಾಗಿದೆ. ಕೆಲವೊಂದು ಟೈಮ್ ಕೀಪಿಂಗ್ ಪಾಯಿಂಟುಗಳು ಈ ಸಂಘಟನೆ ಪಡೆಗಳ ಖಾಯಂ ಅಡ್ಡೆಯಾಗಿ ಬದಲಾಗಿವೆ. ಇದೆಲ್ಲ ಕಾಂಗ್ರೆಸ್ ಸರಕಾರದ ರಾಜಕಾರಣಿಗಳ ಮೂಗಿನಡಿಯೇ ನಡೆಯುತ್ತಿರುವುದು ವಿಪರ್ಯಾಸ.

ಬಹುತೇಕ ಖಾಸಗಿ ಬಸ್ಸುಗಳು ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ಮಂಗಳೂರು ನಗರದ ಇಂದಿನ ಸಂಚಾರ ಅಸ್ತವ್ಯಸ್ತಕ್ಕೆ ಖಾಸಗಿ ಬಸ್ಸುಗಳ ಚಾಪೆ ಹಾಕುವ ಪ್ರವೃತ್ತಿ, ನಿಧಾನವಾಗಿ ಬಸ್ ಓಡಿಸುವುದು, ನಗರದಲ್ಲಿ ಅಲ್ಲಲ್ಲಿ ನಿಲ್ಲಿಸುವುದು, ಅನಂತರ ನಗರದ ಹೊರವಲಯದಲ್ಲಿ ಮಿತಿ ಮೀರಿ ವೇಗದಲ್ಲಿ ಓಡಾಟ ನಡೆಸುವುದು ಕಾರಣ ಎನ್ನುವುದು ಯಾರಿಗೆ ತಿಳಿದಿಲ್ಲ ? ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷೆ, ರಸ್ತೆಯಲ್ಲಿ ಓಡಾಡುವ ಇತರರ ಬಗ್ಗೆ ಇವರಿಗೆ ಕನಿಷ್ಟ ಗೌರವ ಕೂಡ ಇಲ್ಲ.

ನಗರದಲ್ಲಿ ಟ್ರಾಫಿಕ್ ಜಾಮ್ ಆಯಿತು ಎಂದಾಗ ಯಾವುದೇ ಸಣ್ಣ ಒಳ ರಸ್ತೆಯಲ್ಲೂ ನುಗ್ಗಿಸಲು ಹೇಸದ ಬಸ್ ಸಿಬ್ಬಂದಿಗೆ ಕಾನೂನು ಕಟ್ಟಳೆ ಒಂದೂ ಇಲ್ಲ. ಪೆÇಲೀಸರು ದಂಡ ವಿಧಿಸಿದರೂ ಇಂತಹ ರೂಟ್ ಪರ್ಮಿಟ್ ಇಲ್ಲದ ರಸ್ತೆಯಲ್ಲಿ ಓಡಾಟ ನಡೆಸುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

ಪ್ರಯಾಣಿಕರನ್ನು ಹತ್ತಿಸಲು ರಸ್ತೆಯ ಮಧ್ಯ ಭಾಗದಲ್ಲೇ ನಿಲ್ಲಿಸುವುದು, ಕರ್ಕಶ ಹಾರ್ನ್ ಬಳಕೆ, ಗಡಿಬಿಡಿಯಲ್ಲಿ ಜನರನ್ನು ಹತ್ತಿಸುವುದು, ಆಗಾಗ ಬ್ರೇಕ್ ಹಾಕುವುದು ಇತ್ಯಾದಿ ಕಾರಣಗಳಿಂದ ಮಹಿಳೆಯರಿಗೆ, ವೃದ್ಧರಿಗೆ ಬಸ್ ಸಂಚಾರ ಎಂಬುದು ಮಾರಣಾಂತಿಕವಾಗಿದೆ.

ಇನ್ನು ಸಿಸಿ ಬಸ್ ಎಂದೇ ಕುಖ್ಯಾತಿ ಹೊಂದಿರುವ ಕಾಂಟ್ರಕ್ಟ್ ಕ್ಯಾರೇಜ್ ಬಸ್ಸುಗಳು ಹೆಸರೇ ಸೂಚಿಸುವಂತೆ ಸಂಪೂರ್ಣ ಕಾನೂನು ಉಲ್ಲಂಘಿಸಿ ಓಡಾಟ ನಡೆಸುತ್ತಿವೆ. ಅವುಗಳು ಕೂಡ ಕಳೆದ ಶನಿವಾರ ರಸ್ತೆಗೆ ಇಳಿಯಲಿಲ್ಲ. ಮಂಗಳೂರು ನಗರ ಪೆÇಲೀಸರು ಸ್ಟೇಟ್ ಬ್ಯಾಂಕ್ ಪ್ರವೇಶಿಸುವ ಸಿಸಿ ಬಸ್ಸುಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಕಳೆದ ವರ್ಷ ಇಂತಹ ಕಾನೂನು ಉಲ್ಲಂಘಿಸುವ ಸಿಸಿ ಬಸ್ಸುಗಳ ವಿರುದ್ಧ ಕ್ರಮಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾದಾಗ ಜಿಲ್ಲೆಯ ಕಾಂಗ್ರೆಸ್ ರಾಜಕಾರಣಿಯೊಬ್ಬರು ಹಸ್ತಕ್ಷೇಪ ನಡೆಸಿದ್ದರು.

ಬಹುತೇಕ ಯಾವುದೇ ಸಾಮಾಜಿಕ ಬದ್ಧತೆ ಇಲ್ಲದ, ಕ್ರಿಮಿನಲ್ ಚಟುವಟಿಕೆಗೆ ಆಸ್ಪದ ನೀಡುವ, ಕಾನೂನು ಉಲ್ಲಂಘಿಸುವ ಸಾರಿಗೆ ವ್ಯವಸ್ಥೆಯನ್ನು ಹಂತ ಹಂತವಾಗಿ ಕೊನೆಗಾಣಿಸಲು ಇದು ಸಕಾಲವಾಗಿದೆ.