ಪುತ್ರನ ಜತೆ ವೈಮನಸ್ಸು ಗುಂಡೇಟಿಗೆ ಕಾರಣ

ವಿಟ್ಲ ಶೂಟೌಟ್ ಪ್ರಕರಣ
ವಿಟ್ಲ : ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರೈಪಲ್ಲ್ಲಿನಿಂದ ಗುಂಡು ಹಾರಿಸಿಕೊಂಡು ಇಂದ್ರಕುಮಾರ್ (64) ಎಂಬವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಇವರು ತನ್ನ ಪುತ್ರನ ಮೇಲೆ ಗುಂಡು ಹಾರಿಸಿದ್ದು, ಪುತ್ರ ಸತ್ತಿರಬೇಕೆಂಬ ಶಂಕೆಯಿಂದ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಈ ನಡುವೆ ಈ ಘಟನೆ ನಡೆಯಲು ಪ್ರಮುಖ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ತನ್ನ ತಂದೆ ಕಳೆದ 20 ವರ್ಷಗಳಿಂದ ತನ್ನ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದು, ಕೆಲವು ತಿಂಗಳಿನಿಂದ “ನಿನ್ನನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆಯನ್ನು ಹಾಕುತ್ತಿದ್ದರು” ಎಂದು ಮಗ ಚಂದ್ರಹಾಸ ಈ ಹಿಂದೆಯೊಮ್ಮೆ ವಿಟ್ಲ ಠಾಣೆಗೆ ದೂರು ನೀಡಿದ್ದ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಪ್ರಕರಣವನ್ನು ಇತ್ಯಥ್ರ್ಯಪಡಿಸಲಾಗಿತ್ತು.
ಕೃಷಿಕರಾಗಿದ್ದ ಇಂದ್ರಕುಮಾರ್ ಅವರ ಪುತ್ರ ಚಂದ್ರಹಾಸ್ ರಾತ್ರಿ 9.30ರ ಸುಮಾರಿಗೆ ತನ್ನ ಮನೆಗೆ ಬಂದಿದ್ದು, ತಾಯಿ ಜೊತೆಗೆ ಊಟಕ್ಕೆ ಕುಳಿತುಕೊಂಡಿದ್ದರು. ಈ ವೇಳೆ ಬಂದೂಕು ಶಬ್ದ ಇವರ ಕಿವಿಗೆ ಬಿದ್ದಿದ್ದು, ಅರ್ಧಕ್ಕೆ ಊಟ ಬಿಟ್ಟು ಹೊರ ನಡೆದಿದ್ದಾರೆ. ಇದೇ ವೇಳೆ ತಂದೆ ಚಂದ್ರಹಾಸರ ಮೇಲೆ ಗುಂಡು ಹಾರಿಸಿದ್ದು, ಕೂದಲೆಳೆಯ ಅಂತರದಿಂದ ಚಂದ್ರಹಾಸ ಪಾರಾಗಿದ್ದಾರೆ. ಕೂಡಲೇ ಅವರು ಅಲ್ಲಿಂದ ಹೊರಗೆ ಓಡಿ, ಪಕ್ಕದ ಮನೆಯ ಗೇಟು ತೆರೆಯುತ್ತಿದ್ದಂದತೆ ಚಂದ್ರಹಾಸ್ ಇನ್ನೊಂದು ಸುತ್ತು ಗುಂಡು ಹಾರಿಸಿದ್ದು, ಚಂದ್ರಹಾಸ ಅವರ ಬೆನ್ನಿಗೆ ಗಾಯವೂ ಆಗಿದೆ.
ತನ್ನ ಮಗ ಸತ್ತೇ ಹೋಗಿದ್ದಾನೆಂಬ ಶಂಕೆಯಿಂದ ಇಂದ್ರಕುಮಾರ್, ಇನ್ನು ಅಪವಾದವನ್ನು ಹೊತ್ತುಕೊಂಡು ಸಮಾಜದಲ್ಲಿ ಬದುಕಲು ಸಾದ್ಯವಿಲ್ಲ ಎಂದು ತಾನೂ ಕೂಡ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ