ಕಾರು ಡಿಕ್ಕಿ : ಬೈಕ್ ಸವಾರರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಬಳಿ ಬುಧವಾರ ಬೆಳಗ್ಗೆ ಬೈಕಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ.

ಬೈಕ್ ಸವಾರರಾದ ಬಾರ್ಯ ಗ್ರಾಮದ ಮಾಫಲಮೂಲೆ ಮನೆಯ ಪ್ರವೀಣ್ ಹಾಗೂ ಶಿಶಿಲದ ಪ್ರಶಾಂತ್ ಗಾಯಗೊಂಡಿದ್ದಾರೆ. ಅವರಲ್ಲಿ ಪ್ರಶಾಂತ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಶಾಂತ್ ಹಾಗೂ ಪ್ರವೀಣ್ ಅವರು ಫಲ್ಸರ್ ಬೈಕಿನಲ್ಲಿ ಕಲ್ಲೇರಿ-ಮಂಡತ್ಯಾರು ರಸ್ತೆಯಲ್ಲಿ ಮಾಫಲಮೂಲೆಗೆ ತೆರಳುತ್ತಿದ್ದ ಸಂದರ್ಭ ಕಲ್ಲೇರಿ ಕಡೆಗೆ ಬರುತ್ತಿದ್ದ ಶಿಫ್ಟ್ ಕಾರು ಇವರ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಮಗುಚಿ ಬಿದ್ದಿದ್ದು, ಚಕ್ರಗಳು ಮೇಲಾಗಿ ರಸ್ತೆ ಮಧ್ಯದಲ್ಲಿ ಬಿದ್ದಿದೆ. ಕಾರಿನ ಎದುರಿನ ಚಕ್ರ ಒಡೆದು ಹೋಗಿದೆ.

ಪ್ರವೀಣ್ ಅವರಿಗೆ ಮೇ 7ರಂದು ಮದುವೆಯಾಗಿದ್ದು, ಮೇ 10ರಂದು ಮಾಫಲಮೂಲೆಯ ಪ್ರವೀಣ್ ಅವರ ಮನೆಯಲ್ಲಿ ಬೀಗರಿಗಾಗಿ ಔತಣಕೂಟ ಏರ್ಪಡಿಸಲಾಗಿತ್ತು. ಅದರ ಸಿದ್ಧತೆಯಲ್ಲಿದ್ದ ಅವರು ಸಂಬಂಧಿ ಪ್ರಶಾಂತ್ ಅವರೊಂದಿಗೆ ಪಾತ್ರೆ ತೆಗೆದುಕೊಂಡು ಹೋಗಲು ಕಲ್ಲೇರಿಗೆ ಬಂದಿದ್ದರು. ಈ ಸಂದರ್ಭ ಈ ದುರ್ಘಟನೆ ನಡೆದಿದೆ. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಇವರನ್ನು ಸ್ಥಳೀಯರಾದ ಮುಹಮ್ಮದ್ ನಿಸಾರ್ ಹಾಗೂ ಸಾದಿಕ್ ಎಂಬವರು ಉಪ್ಪಿನಂಗಡಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು.