ಕಲ್ಲಿಗೆ ಬೈಕ್ ಡಿಕ್ಕಿ : ಸವಾರರಿಬ್ಬರು ಮೃತ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಹಳಿಯಾಳ : ಪಟ್ಟಣದಲ್ಲಿ ಗುರುವಾರ ರಾತ್ರಿ ಬೈಕೊಂದು ಅತಿವೇಗವಾಗಿ ಅಪಾಯಕಾರಿ ತಿರುವಿನಲ್ಲಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.

ದಾಂಡೇಲಿ ನಗರದ ಮಿರಾಶಿ ಗಲ್ಲಿಯ ನಿವಾಸಿ ಸಂಭಾಜೀ ಬಲರಾಮ್ ಸಾಂಬ್ರೇಕರ ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ಮೃತಪಟ್ಟರೆ, ಜೋಯಿಡಾ ತಾಲೂಕಿನ ಪಟೋಳಿ ತಾಂಬಡೆ ಗ್ರಾಮದ ರಡು ಮಾವಳು ಗೌಡಾ ಎಂಬಾತನೂ ಮೃತಪಟ್ಟಿದ್ದಾನೆ. ಇವರಿಬ್ಬರು ಗುರುವಾರ ಪಟ್ಟಣದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯನ್ನು ಮುಗಿಸಿಕೊಂಡು ಸಂಜೆ ಸುಮಾರು 7 ಗಂಟೆಗೆ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾಗೆ ಈ ಅವಘಡ ಸಂಭವಿಸಿದೆ.

ಹಳಿಯಾಳದಿಂದ ಕೇವಲ 5 ಕಿ ಮೀ ಅಂತರದಲ್ಲಿರುವ ಕೆಸರೊಳ್ಳಿ ಗ್ರಾಮದ ಅಪಾಯಕಾರಿ ತಿರುವಿನಲ್ಲಿ ಬೈಕ್ ಮೂಲಕ ಸಾಗುತ್ತಿದ್ದಾಗ ರಸ್ತೆ ಪಕ್ಕದ ಕಚ್ಚಾ ರಸ್ತೆಯ ಮೇಲಿದ್ದ ಬಂಡೆಗಲ್ಲಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಸಂಭಾಜಿ ಸ್ಥಳದಲ್ಲಿಯೇ ಮೃತಪಟ್ಟರೆ, ಹಿಂಬದಿ ಸವಾರ ರಡು ಗೌಡಾ ಧಾರವಾಡದ ಸಿವಿಲ್ ಆಸ್ಪತ್ರೆಗೆ ಸಾಗಿಸುವಾಗ ಅಸು ನೀಗಿದ್ದಾನೆ. ವಿಷಯ ತಿಳಿದ ತಕ್ಷಣ ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.