ಅಪರಿಚಿತ ವಾಹನ ಗುದ್ದಿ ದ್ವಿಚಕ್ರ ವಾಹನ ಸವಾರ ಸ್ಪಾಟ್ ಡೆತ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ತಾಲೂಕಿನ ಬೈಲೂರು ಕ್ರಾಸ್ ಬಳಿ ಬುಧವಾರ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನೊಬ್ಬ ರಸ್ತೆಯಂಚಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಹೊನ್ನಾವರ ಮಂಕಿಯ ಬಳ್ಕೂರು ನಿವಾಸಿ ಗಣೇಶ ಗೋವಿಂದ ನಾಯ್ಕ (26) ಮೃತಪಟ್ಟವನಾಗಿದ್ದಾನೆ. ಈತ ಬುಧವಾರ ಬೆಳಗಿನ ಜಾವ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಯಾವುದೋ ವಾಹನ ಡಿಕ್ಕಿಯಾದ ಪರಿಣಾಮ ರಸ್ತೆಯಂಚಿಗೆ ಬಿದ್ದು ತಲೆಗೆ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಪೂನಾದಲ್ಲಿ ಹೋಟೆಲ್ ಉದ್ಯೋಗ ಮಾಡಿಕೊಂಡಿದ್ದು ಈತ ಊರಿಗೆ ಮರಳಿರುವಾಗ ಘಟನೆ ಸಂಭವಿಸಿದೆ. ಅಪಘಾತದ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡಿಕ್ಕಿ ಹೊಡೆದ ಅಪರಿಚಿತ ವಾಹನ ಯಾವುದು ಎನ್ನುವುದರ ಬಗ್ಗೆ ಪತ್ತೆ ಕಾರ್ಯ ಮುಂದುವರಿದಿದೆ.