ಹೊಂಡದಿಂದ ಮೇಲೆಕ್ಕೆತ್ತಲು ಸಹಾಯ ಮಾಡಿದ ಪೊಲೀಸಿಗೆ ಹಲ್ಲೆ ಮಾಡಿ ಸವಾರ ಪರಾರಿ

ಸಾಂದರ್ಭಿಕ ಚಿತ್ರ

ಮಂಗಳೂರು : ಹೊಂಡಕ್ಕೆ ಬಿದ್ದ ಬೈಕ್ ಸವಾರನನ್ನು ಮೇಲಕ್ಕೆತ್ತಿ ಸಹಾಯ ಮಾಡಿದ ಪೊಲೀಸಪ್ಪನಿಗೆ ಬೈಕ್ ಸವಾರ ಹಲ್ಲೆ ನಡೆಸಿ ಕಾಲ್ಕಿತ್ತಿದ್ದಾನೆ. ಈ ಘಟನೆ ಕೊಣಾಜೆ ಠಾಣಾ ವ್ಯಾಫ್ತಿಯ ಬೋಳಿಯಾರ್ ಬಳಿ ನಡೆದಿದೆ.

ರಾತ್ರಿ ಪಾಳಿಯಲ್ಲಿದ್ದ ಕೊಣಾಜೆ ಪೊಲೀಸ್ ಠಾಣೆಯ ಕಾನ್ಸ್‍ಟೆಬಲ್ ಆದರ್ಶ್ (23) ಅವರು ಬೋಳಿಯಾರಿನಿಂದ ಬೈಕಿನಲ್ಲಿ ಮುಡಿಪು ಕಡೆಗೆ ತೆರಳುತ್ತಿದ್ದರು. ಈ ವೇಳೆ ಮುಡಿಪುವಿನಿಂದ ಬೋಳಿಯಾರ್ ಕಡೆಗೆ ಹೋಗುತ್ತಿದ್ದ ವ್ಯಕ್ತಿ ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದು ನರಳಾಡುತ್ತಿದ್ದ. ಇದನ್ನು ಕಂಡ ಕಾನ್ಸ್‍ಟೆಬಲ್ ಮಾನವೀಯತೆ ನೆಲೆಯಲ್ಲಿ ಬೈಕ್ ಸವಾರನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಆದರ್ಶ್ ಸಹಾಯ ಪಡೆದುಕೊಂಡು ಹೊಂಡದಿಂದ ಮೇಲಕ್ಕೆ ಬಂದ ಬೈಕ್ ಸವಾರ ಬಳಿಕ ಏಕಾಏಕಿ ಕುಪಿತಗೊಂಡು, ರಸ್ತೆ ಪಕ್ಕದ ಹೊಂಡಗಳನ್ನು ಮುಚ್ಚಲು ನಿಮಗೇನು ಸಂಕಟವೇ ಎಂದು ತುಳು ಭಾಷೆಯಲ್ಲಿ ಪೊಲೀಸನನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ. ಅಷ್ಟಕ್ಕೆ ನಿಲ್ಲಿಸದ ಆತ ಪೊಲೀಸನ ಕೆನ್ನೆಗೇ ಬಾರಿ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾಗಿದ್ದಾನೆ.

ರಾತ್ರಿಯಾಗಿದ್ದರಿಂದ ಬೈಕ್ ನಂಬರ್ ನೋಟ್ ಮಾಡಲು ಪೊಲೀಸಿಗೆ ಸಾಧ್ಯವಾಗಲಿಲ್ಲ. ಅಲ್ಲದೆ ಏಕಾಏಕಿ ಆತನ ಹಲ್ಲೆಯಿಂದ ವಿಚಲಿತನಾದ ಆದರ್ಶ್ ಬಳಿಕ ಚೇತರಿಸಿಕೊಂಡು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.