ನೋಟು ಅಮಾನ್ಯ ಎಫೆಕ್ಟ್ : ಕೇವಲ ರೂ 1000 ವ್ಯಯಿಸಿ ಶ್ರೀಮಂತ ಜೋಡಿ ವಿವಾಹ

ಭೋಪಾಲ್ : ನೋಟು ಅಮಾನ್ಯದ ಪ್ರಭಾವವೆಂಬಂತೆ ಮಧ್ಯ ಪ್ರದೇಶದ ರತ್ಲಂ ಪಟ್ಟಣದಲ್ಲಿ ರವಿವಾರ ಶ್ರೀಮಂತ ಕುಟುಂಬಗಳಿಗೆ ಸೇರಿದ ಜೋಡಿಯ ವಿವಾಹ ಸಮಾರಂಭವೊಂದು ಅತ್ಯಂತ ಸರಳವಾಗಿ  ನಡೆದಿದೆ. ಸಮಾರಂಭಕ್ಕೆ ಆಗಮಿಸಿದ್ದ  ಅತಿಥಿಗಳಿಗೆ ಮೃಷ್ಟಾನ್ನ ಭೋಜನದ ಬದಲು ಕೇವಲ ಚಹಾ ನೀಡಿ ವಿವಾಹವನ್ನು ಮುಕ್ತಾಯಗೊಳಿಸಿದ್ದು ವಿಶೇಷ.

ಸರಕಾರ ಹಳೆಯ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಕಾರಣ ಕಪಿಲ್ ರಾಥೋರ್ ಹಾಗೂ ಅಂತಿಂಬಾಲ ಎಂಬ ಜೋಡಿಯು ವಿವಾಹಕ್ಕೆ ಅಗತ್ಯವಿರುವ ಹಣದ ಏರ್ಪಾಡು ಮಾಡಲು ವಿಫಲಗೊಂಡ  ನಂತರ ಈ ಸರಳ ವಿವಾಹಕ್ಕೆ ಮೊರೆಹೋಗಿದೆ.

ಸ್ಥಳೀಯ ನ್ಯಾಯಾಲಯವೊಂದರಲ್ಲಿ ಶನಿವಾರ ವಿವಾಹ ನೋಂದಣಿ ಮಾಡಿಸಿಕೊಂಡ ಜೋಡಿ ಭಾನುವಾರದಂದು  ರಾಮ ದೇವಳದಲ್ಲಿ ಸಪ್ತಪದಿ ತುಳಿಯಿತು. ವಿವಾಹ ಸಮಾರಂಭಕ್ಕೆ ಎರಡೂ ಕಡೆಗಳಿಂದ  ಸುಮಾರು 800 ಅತಿಥಿಗಳು ಆಗಮಿಸಿದ್ದರು. ಇಡೀ ಸಮಾರಂಭಕ್ಕೆ  ಕೇವಲ ರೂ 1,000 ವೆಚ್ಚ ತಗಲಿರಬಹುದು ಎಂದು ಅಂದಾಜಿಸಲಾಗಿದೆ.