ಆಹಾರ ಸಚಿವರ ಊರಿನಲ್ಲೇ ಅಕ್ಕಿ ಕೊರತೆ !

ಸಾಂದರ್ಭಿಕ ಚಿತ್ರ

ಅಂಗಡಿ ಮುಚ್ಚುತ್ತಿರುವ ರೇಶನ್ ಅಂಗಡಿ ಮಾಲಕರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಯು ಟಿ ಖಾದರ್ ಅವರ ತವರು ಕ್ಷೇತ್ರದಲ್ಲೇ ಅಕ್ಕಿಯ ಕೊರತೆ ಕಾಡುತ್ತಿದೆ. ಹೀಗಾಗಿ ರೇಶನ್ ಅಂಗಡಿ ಮಾಲಕರು ತಮ್ಮ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಮುಖ್ಯವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬೆಳ್ಮ, ಕಿನ್ಯಾ ಮತ್ತು ಕೋಟೆಕಾರಿನಲ್ಲಿ ಪಡಿತರ ಸಾಮಗ್ರಿಗಳು ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗದಿರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ಅಕ್ಕಿ ಪೂರೈಕೆಯಾಗುವ ತನಕ ತಮ್ಮ ಅಂಗಡಿಗಳನ್ನು ಮುಚ್ಚುಲು ಮಾಲಕರು ನಿರ್ಧರಿಸಿದ್ದಾರೆ.

ಇದೀಗ ಮಾಡಲಾಗಿರುವ ಕೂಪನ್ ವ್ಯವಸ್ಥೆಯಿಂದ ಈ ಸಮಸ್ಯೆ ಏಕಾಏಕಿ ಕಂಡುಬಂದಿದೆ. ಕೂಪನ್ ತೆಗೆದುಕೊಂಡು ಬರುತ್ತಿರುವ ಕಾರ್ಡುದಾರರಿಗೆ ರೇಶನ್ ಸಾಮಗ್ರಿಗಳನ್ನು ಒದಗಿಸಲು ಕೊರತೆ ಕಂಡುಬಂದಿದೆ ಎನ್ನುತ್ತಾರೆ ಅಂಗಡಿ ಮಾಲಕರು.

ಆಹಾರ ಖಾತೆ ಸಚಿವರು ಕೆಲ ಸಮಯಗಳ ಹಿಂದೆ ಕೂಪನ್ ಸಿಸ್ಟಂ ಎನ್ನುವ ನೂತನ ವಿಧಾನ ಜಾರಿ ಮಾಡಿದ್ದು, ಕೂಪನ್ ಹಿಡಿದುಕೊಂಡು ಬರುವ ಗ್ರಾಹಕರಿಗೆ ಅಂಗಡಿ ಮಾಲಕರು ಅಕ್ಕಿ ವಿತರಿಸಬೇಕು. ಈ ಕೂಪನುಗಳನ್ನು ಬಳಿಕ ಅಂಗಡಿ ಮಾಲಕರು ಸೈಬರ್ ಸೆಂಟರ್ ಮೂಲಕ ಇಲಾಖೆಗೆ ಅಪ್ಲೋಡ್ ಮಾಡಬೇಕು. ಆದರೆ ಸೈಬರ್ ಸೆಂಟರ್ ಅಂಗಡಿಗಳ ಅವ್ಯವಸ್ಥೆ, ಬೇಜವಾಬ್ದಾರಿ ನಿರ್ವಹಣೆಯಿಂದಾಗಿ ಸಮಯಕ್ಕೆ ಸರಿಯಾಗಿ ಅಕ್ಕಿ ಪೂರೈಕೆಯಾಗದ ಸ್ಥಿತಿ ಎದುರಾಗಿದೆ. ಅಕ್ಕಿ ಇಲ್ಲದೆ ಕಾರ್ಡುದಾರರು ರೇಶನ್ ಅಂಗಡಿ ಮಾಲಕರನ್ನು ಬೈಯ್ಯುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ.