ಕೇಂದ್ರ ಸರಕಾರದ ಎಡವಟ್ಟಿನಿಂದ ರೆವಿನ್ಯೂ ಸ್ಟಾಂಪಿಗೆ ಬರಗಾಲ : ನಾಗರಿಕರು ಕಷ್ಟದಲ್ಲಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಿಧ ಆವಶ್ಯಕತೆಗಳಿಗಾಗಿ ರೆವಿನ್ಯೂ ಸ್ಟಾಂಪ್ ಪಡೆಯಲು ಆಗಮಿಸುವ ನಾಗರಿಕರು ಸೂಕ್ತ ಕಾಲದಲ್ಲಿ ರೆವಿನ್ಯೂ ಸ್ಟಾಂಪುಗಳು ಸಿಗದೇ ಕಷ್ಟಕ್ಕೀಡಾಗುತ್ತಿದ್ದಾರೆ.

ಕಳೆ ಕೆಲವು ತಿಂಗಳಿನಿಂದ ಮಂಜೇಶ್ವರದಿಂದ ಕಾಞಂಗಾಡ್ ತನಕ ಅಧಿಕೃತ ಮಾರಾಟಗಾರರಲ್ಲಿ ರೆವಿನ್ಯೂ ಸ್ಟಾಂಪುಗಳನ್ನು ಕೇಳಿದರೆ “ನಮ್ಮಲ್ಲಿ ಇಲ್ಲ” ಎಂಬ ಉತ್ತರ ಬರುತ್ತಿದೆ. ರೆವಿನ್ಯೂ ಸ್ಟಾಂಪ್ ಸಿಗಬೇಕಾದ ಟ್ರಶರಿಯಲ್ಲೂ ಕೂಡಾ ಇದೀಗ ಇಲ್ಲದಂತಾಗಿದೆ. ಈ ಬಗ್ಗೆ ಟ್ರಶರಿ ಅಧಿಕಾರಿಯಲ್ಲಿ ವಿಚಾರಿಸಿದಾಗ “ಕೇಂದ್ರ ಸರಕಾರದಿಂದ ವಿತರಣೆಯಾಗಬೇಕಿದ್ದ ರೆವಿನ್ಯೂ ಸ್ಟಾಂಪ್ ಇದೀಗ ಲಭಿಸುತ್ತಿಲ್ಲ, ಎರಡು ತಿಂಗಳಿನೊಳಗೆ ಬರಬಹುದು” ತಿಳಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಪಂಚಾಯತಿನಿಂದ ಲಭಿಸಬೇಕಾದ ಅನುದಾನ ಸೇರಿದಂತೆ ಹತ್ತು ಹಲವು ಆವಶ್ಯಕತೆಗಳಿಗಾಗಿ ರೆವಿನ್ಯೂ ಸ್ಟಾಂಪ್ ಅಗತ್ಯವಾಗಿದೆ. ರೆವಿನ್ಯೂ ಸ್ಟಾಂಪ್ ಲಭಿಸದಿದ್ದರೆ ಇದಕ್ಕೆ ಪರ್ಯಾಯ ಯಾವುದೇ ಮಾರ್ಗ ಇಲ್ಲದಿರುವುದು ನಾಗರಿಕರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಕೇಂದ್ರ ಸರಕಾರದ ಎಡವಟ್ಟಿನಿಂದ ರೆವಿನ್ಯೂ ಸ್ಟಾಂಪುಗಳಿಗೆ ಬರಗಾಲ ಬಂದಿದೆ ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರಾದರೂ ರೆವಿನ್ಯೂ ಸ್ಟಾಂಪಿಗಾಗಿ ಇನ್ನೂ ಎಷ್ಟು ತಿಂಗಳು ಕಾಯಬೇಕೆಂಬುದು ನಾಗರಿಕರ ಪ್ರಶ್ನೆ.