`ರಾಜ್ಯದ ಭ್ರಷ್ಟ ಸಚಿವರ ಹೆಸರನ್ನು ಬಹಿರಂಗಪಡಿಸಿ’

ಯಡ್ಡಿಗೆ ಕಾಂಗ್ರೆಸ್ ಸವಾಲು

ಬೆಂಗಳೂರು : ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆನ್ನೆಲಾದ ಮೂವರು ರಾಜ್ಯ ಸಚಿವರುಗಳ ಹೆಸರನ್ನು ಬಹಿರಂಗಪಡಿಸುವಂತೆ ಕಾಂಗ್ರೆಸ್ ನಾಯಕ ಹಾಗೂ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್  ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪಗೆ ಸವಾಲು ಹಾಕಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ಮೂವರು ಸಚಿವರು ತಮ್ಮ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆಂದು ಕಳೆದ ಕೆಲವು ದಿನಗಳಿಂದ ಯಡ್ಡಿಯೂರಪ್ಪ ಹೇಳುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಬಂದಿದೆ.

“ನಿಮ್ಮ ಹೆಸರು ಕೂಡ ಭ್ರಷ್ಟ ಸಚಿವರ ಪಟ್ಟಿಯಲ್ಲಿದೆಯೆಂದು ಹೇಳಲಾಗುತ್ತಿದೆಯಲ್ಲ ?” ಎಂದು ಮಾಧ್ಯಮ ಮಂದಿ ಪಾಟೀಲ್ ಅವರನ್ನು ಪ್ರಶ್ನಿಸಿದಾಗ  ಆ ಆರೋಪವನ್ನು ಸಚಿವರು ಸಾರಾಸಗಟಾಗಿ ನಿರಾಕರಿಸಿದರು.

ಅತ್ತ ಕೆಪಿಸಿಸಿ ಕಾರ್ಯಾದಕ್ಷ ದಿನೇಶ್ ಗುಂಡೂರಾವ್ ಅವರು ಕೂಡ ಯಡ್ಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದು, “ಅವರು ಕೆಲ ಕಾಂಗ್ರೆಸ್ ಸಚಿವರ ಭ್ರಷ್ಟಾಚಾರದ ಬಗ್ಗೆ ತಮ್ಮಲ್ಲಿ ದಾಖಲೆಗಳಿದ್ದರೆ ಅವುಗಳನ್ನು ಬಹಿರಂಗಪಡಿಸಲಿ. ಆದರೆ ಅವರು ಹಾಗೆಂದು ಸುಳ್ಳು ಹೇಳಿದ್ದೇ ಆದರೆ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದಿದ್ದಾರೆ. ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ನರೇಂದ್ರ ಮೋದಿ ಸರಕಾರ ಕೇಂದ್ರೀಯ ತನಿಖಾ ಏಜನ್ಸಿಗಳನ್ನು ದುರುಪಯೋಗಪಡಿಸುತ್ತಿದೆ ಎಂದೂ ಅವರು ದೂರಿದರು.