ನಿಮ್ಮ ಮೇಲೆ ಅಭಿಮಾನವಿರಲಿ

ಬದುಕು ಬಂಗಾರ -25

ನಾವೆಲ್ಲರೂ  ಯಾವತ್ತೂ ಸಂತೋಷದಿಂದಿರಲು ಬಯಸುತ್ತೇವೆ. ಆದರೆ ಕೆಲವೊಮ್ಮೆ ನಾವೇ ನಮ್ಮ ಕಡು ವೈರಿಗಳಾಗಿಬಿಡುತ್ತೇವೆ. ನಮ್ಮೊಳಗಿರುವ ದನಿಯೊಂದು ನಮ್ಮ ಟೀಕಾಕಾರನಾಗಿ ನಮ್ಮ ಮನದೊಳಗೆ ಋಣಾತ್ಮಕ  ಭಾವನೆಗಳನ್ನು ತುಂಬಿ ಬಿಡುತ್ತದೆ. ಇದು ಸರಿಯಲ್ಲ  ಎಂದು ತಿಳಿದಿದ್ದರೂ ನಮ್ಮ ಮನಸ್ಸು ಅದನ್ನು ಒಪ್ಪಲು ಸಿದ್ಧವಿರುವುದಿಲ್ಲ. ಆದರೆ ಇಂತಹ ಭಾವನೆಯಿಂದ ನಾವೇ ನಮ್ಮನ್ನು ಕಷ್ಟಕ್ಕೆ ದೂಡಿದಂತೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.

ಹಾಗಾದರೆ ಇಂತಹ ಋಣಾತ್ಮಕ ಭಾವನೆಗಳನ್ನು ದೂರ ತಳ್ಳಲು ನಾವೇನು ಮಾಡಬೇಕು  ?

  • ನಿಮ್ಮ ಮೇಲೆ ನಿಮಗೆ ಅಭಿಮಾನವಿರಲಿ :  ನಿಮ್ಮಲ್ಲಿ ಇಲ್ಲದ ವಸ್ತುವಿಗೆ ನೀವು ಕೊರಗುವವರಾಗಿದ್ದರೆ ನೀವು ಸಂತಸದಿಂದಿರಲು ಸಾಧ್ಯವೇ ಇಲ್ಲ. ನೀವು ಸರಿಯಾದ ಹಾದಿಯಲ್ಲಿಯೇ ನಡೆಯುತ್ತಿದ್ದೀರಿ ಎಂಬ ಅರಿವು ನಿಮಗಿದ್ದರೆ ಹಾಗೂ ನೀವು ನಂಬಿದ್ದರೆ, ಸಂತಸದಿಂದಿರಿ. ಕೆಲವೊಮ್ಮೆ ಋಣಾತ್ಮಕ ಭಾವನೆಗಳು ನಿಮ್ಮ ಮೇಲೆ ಹಿಡಿತ ಸಾಧಿಸಲು ಯತ್ನಿಸಿದರೂ  ಅದಕ್ಕೆ ಪ್ರತಿಕ್ರಿಯಿಸಬೇಡಿ. ನೀವೊಬ್ಬರು ವಿಶಿಷ್ಟ ವ್ಯಕ್ತಿಯೆಂದು ಬಲವಾಗಿ ನಂಬಿ.
  • ನಿಮ್ಮ ಎಲ್ಲಾ ಅನಿಸಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಡಿ :  ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಭಾವನೆಗಳು ಮೂಡುತ್ತಿವೆ ಎಂದಿಟ್ಟುಕೊಳ್ಳಿ. ಒಂದು ಹೆಜ್ಜೆ ಹಿಂದಿಟ್ಟು  ಯೋಚಿಸಿ. ನೀವು ಹೀಗೆ ನಿಮ್ಮ ಅನಿಸಿಕೆಗಳನ್ನು ಹಿಂದೆ ಸರಿದು ಗಮನಿಸಬಹುದೆಂದಾಧರೆ ಆ ಅನಿಸಿಕೆಗಳು ನಿಮ್ಮದಲ್ಲ ಎಂದು ತಿಳಿಯಿರಿ. ನಿಮ್ಮ ಮೆದುಳು ಒಂದು ಸಾಧನದಂತೆ ; ಅದರಲ್ಲಿ ಮೂಡಿ ಬರುವ ಎಲ್ಲವನ್ನೂ ನೀವು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ.
  • ದಯೆ ತೋರಿಸಿ : ಇಲ್ಲಿ ನೀವು ಬೇರೆಯವರಿಗೆ ದಯೆ ತೋರಿಸಬೇಕೆಂದು ನಾವು ಹೇಳುತ್ತಿಲ್ಲ. ನಿಮಗೆ ನೀವೇ ದಯೆ ತೋರಿಸಿ. ಈ ಜಗತ್ತಿನಲ್ಲಿ ಬಹಳಷ್ಟು ಪ್ರೀತಿಯ ಅಗತ್ಯವಿರುವವರು ನೀವೇ ಎಂದು  ಅಂದುಕೊಳ್ಳಿ. ನಿಮ್ಮ ಬಗ್ಗೆ ನೀವೇ ತೀರ್ಪುಗಾರರಾಗಲು ಹೋಗಬೇಡಿ.
  • ಇದ್ದಂತೆ ಇದ್ದು ಬಿಡಿ : ನಿಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರದಲ್ಲಾದರೂ ಅಸಮಾಧಾನವಿದೆಯೆಂದು ಇಟ್ಟುಕೊಳ್ಳಿ. ಆಗ ನೀವು ತೋರ್ಪಡಿಕೆಗೆ ಎಲ್ಲವೂ ಸರಿಯಾಗಿದೆ ಎಂಬಂತೆ ನಟಿಸಬೇಡಿ. ಅಸಮಾಧಾನವಿದ್ದರೆ ಅದನ್ನು ಅಡಗಿಸಬೇಡಿ. ಇದ್ದಂತೆಯೇ ಇದ್ದು ಬಿಡಿ. ನಿಮಗೆ ದುಃಖವಾಗಿದ್ದರೆ ಹಾಗೆಯೇ ಇದ್ದು ಬಿಡಿ, ನೀವು ಸಂತಸದಿಂದಿದ್ದೀರಿ ಎಂದು ತೋರ್ಪಡಿಸುವ ಯತ್ನ ಬೇಡ.