ಬೆಳಗಾವಿ : ಪರಿಸರಸೂಕ್ಷ್ಮ ಪ್ರದೇಶದ ರೆಸಾರ್ಟ್ ಧ್ವಂಸ

ಬೆಳಗಾವಿ : ಅರಣ್ಯ, ವನ್ಯಜೀವಿ ಅಥವಾ ಪರಿಸರ ಇಲಾಖೆಯ ಅನುಮತಿ ಇಲ್ಲದೆ ಬವೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಳೆ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಸೌತಿರ ರೆಸಾರ್ಟನ್ನು ಇತ್ತೀಚೆಗೆ ಬೆಳಗಾವಿ ಜಿಲ್ಲಾ ಅಧಿಕಾರಿಗಳು ನೆಲಸಮಗೊಳಿಸಿದರು.

ಭೀಮಗಢ ವನ್ಯಜೀವಿ ಧಾಮದೊಳಗೆ ನಿರ್ಮಿಸಲಾಗಿರುವ ಈ ಅಕ್ರಮ ರೆಸಾರ್ಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಹಲವು ಬಾರಿ ನೋಟಿಸು ಜಾರಿ ಮಾಡಿತ್ತು.

ನೋಟಿಸು ಜಾರಿಗೊಂಡ ಹೊರತಾಗಿಯೂ ಈ ಅಕ್ರಮ ಕಟ್ಟಡದ ವಿರುದ್ಧ ರಾಜ್ಯ ಅರಣ್ಯ ಇಲಾಖೆ, ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂಬ ವರದಿ ಆಂಗ್ಲ ಪತ್ರಿಕೆಯೊಂದರಲ್ಲಿ ನವಂಬರ್ 26ರಂದು ಪ್ರಕಟಗೊಂಡಿತ್ತು.

“ಕಂದಾಯ ಅಧಿಕಾರಿಗಳು ಮೂರು ದಿನಗಳ ಹಿಂದೆ ರೆಸಾರ್ಟ್ ಕಟ್ಟಡ ನೆಲಸಮಗೊಳಿಸಿದ್ದಾರೆ. ಹೋಂಸ್ಟೇಯಂತೆ ವ್ಯವಹರಿಸುತ್ತಿದ್ದ ಇದರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯವಾಗಿದೆ” ಎಂದು ಬೆಳಗಾವಿ ಡಿಸಿಎಫ್ ಬಸವರಾಜ್ ಪಾಟೀಲ್ ಹೇಳಿದರು.

“ಅಭಿವೃದ್ಧಿ ಚಟುವಟಿಕೆಗಳಿಗೆ ಭಾರೀ ಒತ್ತಡ ಬಂದಿದೆ. ಆದರೆ ವನ್ಯಜೀವಿಗಳ ನೆಮ್ಮದಿ ಹಿನ್ನೆಲೆಯಲ್ಲಿ ನಾವು ಈ ಕ್ರಮ ಜರುಗಿಸಿದ್ದೇವೆ” ಎಂದವರು ತಿಳಿಸಿದರು.

ಸೌತಿರ ಮಿನಿ-ವಾಟರ್ ಪಾರ್ಕ್ ಮತ್ತು ರೆಸಾರ್ಟ್ ಇಲ್ಲಿ 2015ರಿಂದಲೂ ವ್ಯವಹಾರ ನಡೆಸುತ್ತಿದೆ. ಇದು ಬೇಳಗಾವಿ ಅರಣ್ಯ ವಿಭಾಗದ ಕನಕುಂಬಿ ಟೆರಿಟೋರಿಯಲ್ ರೇಂಜಿನೊಳಗೆ ನಿರ್ಮಿಸಲ್ಪಟ್ಟಿದೆ. ಇದೊಂದು ವನ್ಯಜೀವಿ ಸೂಕ್ಷ್ಮ ಪ್ರದೇಶವಾಗಿದೆ.