ಸರಗಳ್ಳರನ್ನು ಪೋಲೀಸರಿಗೆ ಹಿಡಿದು ಒಪ್ಪಿಸಿದ ಜನರು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಠಾಣಾ ವ್ಯಾಪ್ತಿಯ ಪಾವಂಜೆ ಜ್ಞಾನಶಕ್ತಿ ದೇವಸ್ಥಾನದ ಷಷ್ಠಿ ಮಹೋತ್ಸವದಂದು ಸರಕಳ್ಳತನ ಮಾಡಿದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರು ಮೂಲ್ಕಿ ಪೊಲೀಸರಿಗೆ ಒಪ್ಪಿಸಿದರು.  ಸೋಮವಾರದ ಷಷ್ಠಿ ದಿನದಂದು ಪಾವಂಜೆಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಈ ಸಮಯದಲ್ಲಿ ಕೈಚಳಕ ತೋರಿಸಿದ ಇಬ್ಬರು ಹೆಂಗಸರು ಸರಕಳ್ಳತನ ನಡೆಸುತ್ತಿರುವಾಗ ಸಾರ್ವಜನಿಕರಿಗೆ ಸಂಶಯ ಬಂದು ಗೂಸಾ ಇಕ್ಕಿ ಮಾಲು ಸಮೇತ  ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳ್ಳತನ ಮಾಡಿದ ನಾಲ್ಕು ಸರಗಳ ಪೈಕಿ ಮೂರು ಮಾತ್ರ ದೊರೆತಿದ್ದು ಇನ್ನೊಂದು ಸಿಗಲು ಬಾಕಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಆರೋಪಿಗಳು ಈ ಹಿಂದೆ ಹಲವರು ಸರಕಳ್ಳತನದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದ್ದು ಆರೋಪಿಗಳ ವಿವರ ಇನ್ನಷ್ಠೇ ತಿಳಿಯಬೇಕಾಗಿದೆ.

ಈ ಇಬ್ಬರು ಮಹಿಳೆಯರು ಪೊಲೀಸರಿಗೆ ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದಾರೆ ಎಂದು ತಿಳಿದುಬಂದಿದ್ದು ಇವರ ಹಿಂದೆ ದೊಡ್ಡ ಗ್ಯಾಂಗು ಇರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.