ಮಳೆನೀರು ಹರಿಯುವ ಚರಂಡಿ ಮುಚ್ಚಿದ ಉಚ್ಚಿಲ ಪಂ ಸದಸ್ಯನ ವಿರುದ್ಧ ಆಕ್ರೋಶ

ಉಚ್ಚಿಲ ಬಡಾ ಗ್ರಾ ಪಂ ಸದಸ್ಯ ಮಳೆನೀರು ಹರಿದು ಹೋಗುವ ಚರಂಡಿ ಮುಚ್ಚಿರುವುದು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಮಳೆನೀರು ಹರಿದು ಹೋಗುವ ಚರಂಡಿಗೆ ತನ್ನ ಮನೆ ರಿಪೇರಿ ಸಂದರ್ಭ ಉತ್ಪತ್ತಿಯಾದ ತ್ಯಾಜ್ಯವನ್ನು ಹಾಕಿ ಮುಚ್ಚಿದ್ದ ಬಗ್ಗೆ ಗ್ರಾ ಪಂ.ಗೆ ದೂರು ನೀಡಿದರೂ ಉಚ್ಚಿಲ ಗ್ರಾ ಪಂ ನಿರ್ಲಕ್ಷ್ಯ ತೋರಿದ್ದು, ಆಕ್ರೋಶಗೊಂಡ ಸ್ಥಳೀಯರು ಉಡುಪಿ ತಹಶೀಲ್ದಾರಗೆ ದೂರು ನೀಡಿದ್ದಾರೆ.

ಮಾಜಿ ಅಧ್ಯಕ್ಷ ಹಾಗೂ ಹಾಲಿ ಉಚ್ಚಿಲ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಕೋಟ್ಯಾನ್ ತನ್ನ ಪ್ರಭಾವ ದುರುಪಯೋಗ ಪಡಿಸಿಕೊಂಡವರು.

“ಅನಾದಿಕಾಲದಿಂದ ಇದ್ದ ಮಳೆ ನೀರು ಹರಿದು ಸಮುದ್ರಕ್ಕೆ ಹೋಗುವ ಈ ಚರಂಡಿಗೆ ಇದೀಗ ತ್ಯಾಜ್ಯ ಕಲ್ಲು ಮಣ್ಣು ಹಾಕಿದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗದೆ ನಮ್ಮ ತೋಟದಲ್ಲಿ ನೀರು ತುಂಬುವ ಸಾಧ್ಯತೆ ಇದೆ. ಇಲ್ಲಿ ಸಣ್ಣ ಸಣ್ಣ ಮಕ್ಕಳು ಆಟವಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ನಾವು ತಿಂಗಳುಗಳ ಹಿಂದೆ ಪಂ ಅಭಿವೃದ್ಧಿ ಅಧಿಕಾರಿಗೆ ಲಿಖಿತ ದೂರು ನೀಡಿದ್ದೇವೆ. ಇದುವರೆಗೆ ನಮಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಒಂದು ತಿಂಗಳು ಕಳೆದರೂ ಸಮಸ್ಯೆ ಕುರಿತು ಪರಿಶೀಲನೆ ನಡೆಸಲೂ ಕೂಡ ಸ್ಥಳಕ್ಕೆ ಅಭಿವೃದ್ಧಿ ಅಧಿಕಾರಿಗಳಾಗಲಿ ಅಥವಾ ಪಂಚಾಯತಿಯಿಂದ ಯಾವೊಬ್ಬ ಜನಪ್ರತಿನಿಧಿಯೂ ಬಂದಿಲ್ಲ. ಚರಂಡಿಗೆ ಮಣ್ಣು ಹಾಕಿದ ವ್ಯಕ್ತಿ ಪಂಚಾಯತಿ ಸದಸ್ಯನಾದ ಕಾರಣ ಪಿಡಿಒ, ಪಂ ಅಧ್ಯಕ್ಷರು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ” ಎಂದು ಸ್ಥಳೀಯ ನಿವಾಸಿ ವೇಣುಗೋಪಾಲ್ ಆರೋಪಿಸಿದ್ದಾರೆ.

“ಇಲ್ಲಿ ಶ್ರೀಮಂತ ಪ್ರಭಾವಿಗಳಿಗೆ ಒಂದು ಕಾನೂನು ಬಡವರಿಗೆ ಇನ್ನೊಂದು ಕಾನೂನಿದೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಚ್ಚಿಲ ಬಡಾ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಕುಶಾಲಿನಿ, “ಸಮಸ್ಯೆ ಆಗಿರುವುದು ನಿಜ, ನಮಗೆ ಈ ಬಗ್ಗೆ ದೂರು ಬಂದಿದೆ. ಒಬ್ಬ ಪಂಚಾಯತಿ ಸದಸ್ಯನಾಗಿದ್ದು ಮಳೆನೀರು ಹರಿದು ಹೋಗುವ ಚರಂಡಿ ಮುಚ್ಚಿದ್ದು ಸರಿಯಲ್ಲ, ನ್ಯಾಯ ಸಮಿತಿಯಲ್ಲಿ ಚರ್ಚಿಸಿ ಕ್ರಮ ಕೈಗೋಳ್ಳುತ್ತೇವೆ” ಎಂದಿದ್ದಾರೆ.