ವಸತಿ ಸಮುಚ್ಚಯ ನೀರು ಚರಂಡಿಗೆ ಬಿಟ್ಟು ರಥಬೀದಿಯಲ್ಲಿ ಸಾಂಕ್ರಾಮಿಕ ರೋಗ ಭೀತಿ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿನ ರಥಬೀದಿಯಲ್ಲಿರುವ ವಸತಿ ಸಮುಚ್ಚಯ ಮತ್ತು ಕೆಲ ಮನೆಗಳವರು ತ್ಯಾಜ್ಯ ಮತ್ತು ಮಲಿನ ನೀರನ್ನು ಪೈಪ್ ಮೂಲಕ ನೇರವಾಗಿ ಚರಂಡಿಗೆ ಹರಿಬಿಟ್ಟಿದ್ದು, ಪರಿಸರದ ಎಲ್ಲೆಡೆ ಮಾಲಿನ್ಯಗೊಂಡು ದುರ್ನಾತ ಬೀರಲಾರಂಭಿಸಿದೆ ಎಂದು ಮಾಲಿಕುದ್ದೀನಾರ್ ಮಸೀದಿ ಆಡಳಿತ ಮಂಡಳಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ದೂರು ನೀಡಿದೆ.

ವಸತಿ ಸಮುಚ್ಚಯದ ಮಲಿನ ನೀರನ್ನು ಚರಂಡಿಗೆ ಬಿಡಲಾಗಿದೆ. ವಸತಿ ಸಮುಚ್ಚಯದಿಂದ ನೇರವಾಗಿ ಪೈಪನ್ನು ಮಸೀದಿ ಮುಂಭಾಗದ ಚರಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲಿಂದ ಚರಂಡಿ ಮೂಲಕ ಹರಿದು ಹೋಗಿ ಈ ಮಲಿನ ನೀರು ನದಿ ಸೇರುತ್ತಿದೆ. ಪರಿಸರ ಮಲಿನದ ಜೊತೆಗೆ ನದಿ ನೀರು ಮಲೀನವಾಗುವಂತಾಗಿದೆ ಎಂದು ದೂರು ನೀಡಲಾಗಿದೆ.

ಸಾಂಕ್ರಾಮಿಕ ರೋಗ ಭೀತಿ

ತೆರದ ಚರಂಡಿಯಲ್ಲಿ ಮಲಿನ ನೀರು ಹರಿಯುವುದರಿಂದಾಗಿ ಪರಿಸರದ ಎಲ್ಲೆಡೆ ಗಬ್ಬು, ದುರ್ನಾತ ಬೀರುತ್ತಿದೆ. ಈ ಪರಿಸರದಲ್ಲಿ ಹಲವು ಮನೆಗಳ ಸಹಿತ ಮಾಲಿಕುದ್ದೀನಾರ್ ಮಸೀದಿ ಮತ್ತು ಇಂಡಿಯನ್ ಸ್ಕೂಲ್ ಕಾರ್ಯಾಚರಿಸುತ್ತಿದೆ. ಮಸೀದಿ ಮತ್ತು ಸ್ಕೂಲಿನಲ್ಲಿ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಈ ದುರ್ನಾತದಿಂದಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣುವಂತಾಗಿದೆ ಮತ್ತು ಸಾಂಕ್ರಾಮಿಕ ರೋಗದ ಭೀತಿ ವ್ಯಕ್ತವಾಗಿದೆ ಎಂದು ಶಾಲಾ ವಿದ್ಯಾರ್ಥಿ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.