5 ಅಧಿಕಾರಿಗಳ ಕಚೇರಿ ನಿವಾಸಗಳ ಮೇಲೆ ಎಸಿಬಿ ದಾಳಿ ; ಅಕ್ರಮ ಆಸ್ತಿ ಪತ್ತೆ

ಬೆಂಗಳೂರು :  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ರಾಜ್ಯದ ಐದು ಸರಕಾರಿ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ  ಹಲವಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮ  ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಕೆ ಆರ್ ಮಹೇಶ್,  ಕೆಂಗೇರಿಯ ಕಂದಾಯ ನಿರೀಕ್ಷಕ  ಜಿ ಸಿ ಸುರೇಶ್,  ಕೋಲಾರ ಮುಜರಾಯಿ ಇಲಾಖೆಯ ಕಚೇರಿ  ಅಧೀಕ್ಷಕ ನರಸಿಂಹಯ್ಯ,  ಯಲ್ಡೂರು ಗ್ರಾಮ ಪಂಚಾಯತ್ ಕಚೇರಿಯ ಲೆಕ್ಕಾಧಿಕಾರಿ ಎಂ ಆರ್ ಛಲಪತಿ ಗೌಡ ಹಾಗೂ ರಾಮನಗರದ ಬನ್ನಿಕುಪ್ಪೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್  ಗಿರೀಶ್  ಅವರ ಕಚೇರಿಗಳು ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ಸರಕಾರಿ ಅಧಿಕಾರಿಗಳ ಆದಾಯ ಮೂಲಕ್ಕಿಂತಲೂ ಅಧಿಕ ಪ್ರಮಾಣದ  ಅಕ್ರಮ  ಆಸ್ತಿ  ದಾಳಿಗಳ ನಂದರ್ಭ ಪತ್ತೆಯಾಗಿದ್ದು ಭ್ರಷ್ಟಾಚಾರ ನಿಗ್ರಹ ಕಾಯಿದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.