ಒಬಿಸಿಗಳಿಗೂ ಮೀಸಲಾತಿ ನ್ಯಾಯಯುತವಲ್ಲ

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಒಬಿಸಿ ಸಮುದಾಯದ ಜನರೇ ಹೆಚ್ಚು ಶೋಷಣೆ, ದಬ್ಬಾಳಿಕೆ ನಡೆಸುವುದನ್ನು ಅನೇಕ ಸಂದರ್ಭಗಳಲ್ಲಿ ಕಾಣಬಹುದು. ಈ ವಾಸ್ತವವನ್ನು ಪರಿಗಣಿಸುವುದು ಅತ್ಯವಶ್ಯ.

  • ಡಿ ರವಿಕುಮಾರ್-ಸುಖ್ ದೇವ್ ತೋರಟ್

ಮೀಸಲಾತಿ ಎನ್ನುವುದು ಒಂದು ಸೌಲಭ್ಯವಲ್ಲ. ಭಾರತದ ಸಂವಿಧಾನದ ಅನುಸಾರ ಮೀಸಲಾತಿ ಒಂದು ಪರಿಹಾರ ಮಾರ್ಗವಷ್ಟೆ. ವ್ಯವಸ್ಥಿತವಾಗಿ ಶೋಷಣೆಗೆ ಒಳಗಾಗದ ಜನಸಮುದಾಯಗಳಂತೆಯೇ ಸಮಾನ ಅವಕಾಶಗಳನ್ನು ಪರಿಶಿಷ್ಟ ಜಾತಿ ಸಮುದಾಯಗಳಿಗೆ ನೀಡುವ ಪರಿಕಲ್ಪನೆಯಲ್ಲೇ ಮೀಸಲಾತಿ ನೀತಿಯೂ ರೂಪುಗೊಂಡಿತ್ತು.  ಈ  ನಡುವೆ ಒಬಿಸಿಗಳ ಉಗಮ ಮತ್ತು ಮಂಡಲ್ ಆಯೋಗದ ವರದಿ ದೇಶದಲ್ಲಿ ಮೀಸಲಾತಿಯ ವ್ಯಾಖ್ಯಾನವನ್ನೇ ಬದಲಿಸಿತ್ತು.

ತಾವೂ ಶೋಷಣೆಗೊಳಗಾಗಿದ್ದೇವೆ, ಹಾಗಾಗಿ ವಿಶೇಷ ರಕ್ಷಣೆ ತಮಗೂ ದಕ್ಕಲೇ ಬೇಕು ಎಂಬ ಧೋರಣೆಯನ್ನು ಒಬಿಸಿಗಳು ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಒಪ್ಪುವಂತಹ ಮಾತಲ್ಲ. ಏಕೆಂದರೆ ಪರಿಶಿಷ್ಟರು ಶತಮಾನಗಳಿಂದ ಶೋಷಣೆಗೊಳಗಾಗಿದ್ದಾರೆ. ಮಹಿಳೆಯರೂ ಸಹ ಶತಮಾನಗಳಿಂದ ಶೋಷಣೆ ಮತ್ತು ದಬ್ಬಾಳಿಕೆಗೆ ಗುರಿಯಾಗಿರುವುದರಿಂದ ಮಹಿಳಾ ಮೀಸಲಾತಿಯೂ ಒಪ್ಪುವಂತಹುದೇ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಾತಿನಿಧಿಕ ಪಾತ್ರ ಎಷ್ಟೇ ಮಹತ್ವ ಪಡೆದರೂ ಪ್ರಾತಿನಿಧ್ಯ ನೀಡಲು ಮೀಸಲಾತಿ ಒಂದೇ ಮಾರ್ಗವಲ್ಲ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಒಬಿಸಿ ಸಮುದಾಯದ ಜನರೇ ಹೆಚ್ಚು ಶೋಷಣೆ, ದಬ್ಬಾಳಿಕೆ ನಡೆಸುವುದನ್ನು ಅನೇಕ ಸಂದರ್ಭಗಳಲ್ಲಿ ಕಾಣಬಹುದು. ಈ ವಾಸ್ತವವನ್ನು ಪರಿಗಣಿಸುವುದು ಅತ್ಯವಶ್ಯ.

ಅವಕಾಶವಂಚಿತರಾಗಿರುವ ಮತ್ತು ಶೋಷಣೆ ದಬ್ಬಾಳಿಕೆಯನ್ನು ಅನುಭವಿಸಿರುವ ಜನಸಮುದಾಯಗಳಿಗೆ ಸಮಾಜದಲ್ಲಿ ಒಂದಾಗಿ ಬಾಳಲು ಅವಕಾಶ ನೀಡುವ ಉದ್ದೇಶದಿಂದ ಮೀಸಲಾತಿ ನೀತಿಯನ್ನು

ಅನುಸರಿಸಲಾಗುತ್ತದೆ. ಈ ಪದ್ಧತಿ ಭಾರತದಲ್ಲಿ ಮಾತ್ರವೇ ಜಾರಿಯಲ್ಲಿಲ್ಲ. ಅಮೆರಿಕ, ಬ್ರಿಟನ್, ಆಫ್ರಿಕಾದ ಹಲವು ದೇಶಗಳು ಮತ್ತು ಏಷಿಯಾ ಖಂಡದ 110ಕ್ಕೂ ಹೆಚ್ಚು ದೇಶಗಳಲ್ಲಿ ಮೀಸಲಾತಿ ನೀತಿ ಜಾರಿಯಲ್ಲಿದೆ.

ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಪರಿಶಿಷ್ಟ ಸಮುದಾಯಗಳು ಶತಮಾನಗಳ ಕಾಲ ಶೋಷಣೆ ಮತ್ತು ತಾರತಮ್ಯ ಅನುಭವಿಸಿವೆ. ಇಂತಹ ಸಮುದಾಯಗಳ ಜನತೆಗೆ ಮೀಸಲಾತಿ ಅತ್ಯವಶ್ಯ. ಇವರಲ್ಲಿ ಅರ್ಹತೆ ಇದ್ದರೂ ನೌಕರಿ ದೊರೆಯುವುದು ದುಸ್ತರವಾಗಿರುತ್ತದೆ.  ಮೀಸಲಾತಿ ಸೌಲಭ್ಯ ಇಲ್ಲದೆ ಹೋದರೆ ಈ ಜನರಿಗೆ ನ್ಯಾಯ ಒದಗಿಸುವುದಾದರೂ ಹೇಗೆ ?

ಹಲವು ಶತಮಾನಗಳ ಕಾಲ ದಲಿತರು ಮತ್ತು ಆದಿವಾಸಿಗಳಿಗೆ ಸಮಾಜದಲ್ಲಿ ಒಂದು ಉನ್ನತ ಸ್ಥಾನ ದೊರೆಯಲಿಲ್ಲ. ದೇಶಾದ್ಯಂತ ಹಲವಾರು ದೊಂಬಿ ಗಲಭೆಗಳು ನಡೆದಿದ್ದವು. ಈ ಜಾತಿ  ಸಮುದಾಯದವರ ಹೊಲಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಶಾಲೆಗಳಿಂದ ಹೊರದಬ್ಬಲಾಯಿತು.  ಈಗ ಇದೇ ರೀತಿಯ ತಾರತಮ್ಯ ಎದುರಿಸುತ್ತಿದ್ದೇವೆ ಎಂದು ಆರೋಪಿಸುತ್ತಿರುವ ಜಾಟರು ಮತ್ತು ಮರಾಠರೂ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಈ ಜನಸಮುದಾಯಗಳು ಮೀಸಲಾತಿ ಸೌಲಭ್ಯ ಪಡೆಯುವ ಮುನ್ನ ತಾವು ಎದುರಿಸುತ್ತಿರುವ ತಾರತಮ್ಯಗಳನ್ನು ನಿರೂಪಿಸುವುದು ಅತ್ಯವಶ್ಯ.