ಯಡ್ಡಿ ಕಾರ್ಯವೈಖರಿ ವಿರುದ್ಧ ತೀವ್ರಗೊಂಡ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪರ ನಿರಂಕುಶ ಆಡಳಿತ ಶೈಲಿ ವಿರುದ್ಧ ಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ನಂಜನಗೂಡು ಮತ್ತು ಗುಂಡ್ಲುಪೇಟೆ ಅಸೆಂಬ್ಲಿ ಉಪ-ಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ವಿರುದ್ಧ ಕೆಲವರು ತೀವ್ರ ಕೋಪತಾಪ ವ್ಯಕ್ತಪಡಿಸುತ್ತಿದ್ದಾರೆ.  “ಯಡಿಯೂರಪ್ಪರ ಏಕಪಕ್ಷೀಯ ನಿರ್ಧಾರಗಳು ಮತ್ತು ಕಾರ್ಯವೈಖರಿಯಿಂದ ನಾವು ಎರಡೂ ಕಡೆ ಸೋಲುವಂತಾಯಿತು” ಎಂದವರು ಟೀಕಿಸಿದ್ದಾರೆ.

“ಅವರು ತಮ್ಮ ನಿಕಟ ವ್ಯಕ್ತಿಯೊಂದಿಗೆ ಮಾತ್ರ ವಿಶ್ವಾಸದಲ್ಲಿದ್ದಾರೆ. ಎಲ್ಲ ಸಮುದಾಯದ ನಾಯಕರನ್ನು ಅವರೆಂದೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಲು ಇಚ್ಛಿಸಿಲ್ಲ. ಹೆಚ್ಚೇಕೆ, ಉಪ-ಚುನಾವಣೆಯನ್ನು ಪಕ್ಷದ ವ್ಯವಹಾರದ ಬದಲಿಗೆ ತನ್ನ ವೈಯಕ್ತಿಕ ವಿಷಯವಾಗಿ ಪರಿಗಣಿಸಿದ್ದರು” ಎಂದು ಬಿಜೆಪಿ ಅತೃಪ್ತರು ಟೀಕಿಸಿದ್ದಾರೆ.

“ಫಲಿತಾಂಶ ಹೊರಬಿದ್ದ ಬಳಿಕ ಯಡಿಯೂರಪ್ಪ ಕರೆದಿದ್ದ ಮಹತ್ವದ ಸಭೆಗೆ ಪಕ್ಷದ ನೈಜ ನಾಯಕರಿಗೆ ಆಮಂತ್ರಣ ನೀಡಿಲ್ಲ. ಕರಂದ್ಲಾಜೆ, ಸೋಮಣ್ಣ, ಲಿಂಬಾವಳಿ, ರವಿಕುಮಾರಗೆ ಮಾತ್ರ ಎಲ್ಲ ವಿಷಯದಲ್ಲೂ ಭಾರೀ ಮಹತ್ವ ಪಡೆ ಯುತ್ತಿದ್ದಾರೆ. ಇತರರು ಕಡೆಗಣಿಸಲ್ಪಟ್ಟಿದ್ದಾರೆ” ಎಂದು ಪಕ್ಷದ ನಾಯಕರೊಬ್ಬರರು ಬೇಸರ ವ್ಯಕ್ತಪಡಿಸಿದ್ದಾರೆ.

ಕೋರ್ ಕಮಿಟಿ ಸಭೆ ತಿಂಗಳಿಗೊಮ್ಮೆ ನಡೆಯುತ್ತಿಲ್ಲ ಎಂದು ಕೆಲವರು ದೂರಿದ್ದಾರೆ. ಇನ್ನಷ್ಟು ತಡ ಮಾಡದೆ ಸಭೆ ಕರೆಯಬೇಕು ಎಂದವರು ಆಗ್ರಹಿಸಿದ್ದಾರೆ.

2018ರ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಚರ್ಚಿಸಲು ಪಕ್ಷದ ಕಾರ್ಯಸಮಿತಿ ಸಭೆ ಮೇ 6 ಮತ್ತು 7ರಂದು ಮೈಸೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಆ ಸಭೆಯಲ್ಲಿ ಬಿಜೆಪಿ ಅತೃಪ್ತ ನಾಯಕರಿಂದ ಯಡಿಯೂರಪ್ಪರ ಕಾರ್ಯವೈಖರಿ ವಿರುದ್ಧ ಟೀಕೆಗಳ ಸುರಿಮಳೆ ನಿರೀಕ್ಷಿಸಲಾಗಿದೆ.